ಡಾ.ಎಚ್.ಎಸ್. ರಾಘವೇಂದ್ರ ರಾವ್
 
 
(ಈ ಅಂಕಣದಲ್ಲಿ ನಾನು ಹಂಚಿಕೊಳ್ಳಲು ಬಯಸುವ ಸಂಗತಿಗಳು ನನ್ನನ್ನು ಎಂದಿನಿಂದಲೂ ಕಾಡಿವೆ, ಈಗಲೂ ಕಾಡುತ್ತಿವೆ. ಈ ಇಳಿವಯಸ್ಸಿನಲ್ಲಿ, ಇವುಗಳನ್ನು ನಿಮ್ಮೊಂದಿಗೆ ಹೇಳಿಕೊಳ್ಳುವ ಹಂಬಲ ನನ್ನದು. ಆಲೋಚನೆ ಎನ್ನುವುದು ಬದಲಾವಣೆಯ ಮೊದಲ ಹೆಜ್ಜೆ. ಇಲ್ಲಿ ಸವೆದುಹೋದ ಗಾಡಿಜಾಡುಗಳು ಅಪಾಯಕರ. ಈ ಬರಹಗಳಲ್ಲಿ ಉತ್ತರಗಳಿಗಿಂತ ಹೆಚ್ಚಾಗಿ ಪ್ರಶ್ನೆಗಳು ಇರುತ್ತವೆ. ಅವು ನನ್ನ ಪ್ರಶ್ನೆಗಳು ಮಾತ್ರವಲ್ಲ, ನಿಮ್ಮವೂ ಹೌದು. ‘ನಾನು ಉತ್ತರಗಳನ್ನು ಕೊಡಬಲ್ಲೆ, ಅವೇ ಸರಿಯಾದ ಉತ್ತರಗಳು’ ಎಂಬ ಅಹಂಕಾರ ನನಗಿಲ್ಲ. ಹಾಗೆ ನೋಡಿದರೆ, ಯಾರೂ ಯಾರಿಗೂ ದಾರಿ ತೋರಿಸುವುದು ಸಾಧ್ಯವಿಲ್ಲ, ಸರಿಯಲ್ಲ. ಆದರೆ, ಪ್ರಶ್ನೆಗಳನ್ನು ಕೇಳುವುದೆಂದರೆ, ಮನಸ್ಸು ಎಂಬ ತಿಳಿಗೊಳದಲ್ಲಿ ಕಲ್ಲುಗಳನ್ನು ಎಸೆದ ಹಾಗೆ. ನಿಮ್ಮ ಮನಸ್ಸಿನಲ್ಲಿ ಏಳುವ ಅಲೆಗಳು ನಿಮ್ಮವೇ ಆಗಿರುತ್ತವೆ. ಜೀವನದಲ್ಲಿ, ನಮಗೇ ತಿಳಿಯದಂತೆ ನಮ್ಮ ನಡವಳಿಕೆಯನ್ನು ಹಿಡಿತದಲ್ಲಿ ಇಟ್ಟುಕೊಂಡಿರುವ ಕೆಲವು ಸಂಗತಿಗಳನ್ನು ಎದುರಿಸದೆ ಬೇರೆ ದಾರಿಯಿಲ್ಲ. ನಾನು ಸಾಹಿತ್ಯದ ವಿದ್ಯಾರ್ಥಿಯಾದರೂ ಈ ಬರಹಗಳ ಹಿಂದೆ ಇರುವ ಪ್ರೇರಣೆ ಬೇರೆ ಬಗೆಯದು.)  
 
 

ಅನುಭವ ಮತ್ತು ತಲ್ಲೀನತೆ

 
ಇದು ಕೂಡ, ನಮ್ಮೆಲ್ಲರನ್ನೂ ಕಾಡಿರಬಹುದಾದ ಉತ್ತರವಿಲ್ಲದ ಪ್ರಶ್ನೆ. ಯಾವುದೇ ಸಂಗತಿಯನ್ನು ತೀವ್ರವಾಗಿ ಅನುಭವಿಸುವುದಕ್ಕೂ ಅದನ್ನು ಕುರಿತು ಆಲೋಚಿಸುವುದಕ್ಕೂ ಇರುವ ಸಂಬಂಧದ ಬಗ್ಗೆ ನಾನು ಯೋಚಿಸುತ್ತಿದ್ದೇನೆ. ಅವು ಕಣ್ಣು, ಕಿವಿ, ಮೂಗು, ಚರ್ಮ ಮುಂತಾದ ಇಂದ್ರಿಯಗಳಿಂದ ಪಡೆಯುವ ಹಲವು ಬಗೆಯ ಅನುಭವಗಳಿರಬಹುದು ಅಥವಾ ಇವುಗಳಾಚೆಗೆ ಇದೆ ಎನ್ನಲಾದ ಮಾನಸಿಕವಾದ, ಭಾವನಾತ್ಮಕವಾದ ಕೆಲವೊಮ್ಮೆ ಅತೀಂದ್ರಿಯವೆಂದೂ ಕರೆಯಲಾಗುವ ಅನುಭವಗಳೇ ಇರಬಹುದು.  ಸಂಗೀತದ ಹಾಗೆ ಒಂದೇ ಒಂದು ಇಂದ್ರಿಯಕ್ಕೆ ಗೊತ್ತಾಗುವ ನೇರ ಅನುಭವ ಇರಬಹುದು ಅಥವಾ ಹಲವು ಇಂದ್ರಿಯಗಳ ಅನುಭವಗಳು ಸಂಕೀರ್ಣವಾಗಿ ಕಲೆತಿರುವ ಕೂಡುಅನುಭವ ಆಗಿರಬಹುದು. ಉದಾಹರಣೆಗೆ, ಗಂಡು-ಹೆಣ್ಣು ಕೂಡಿ ಪಡೆಯುವ ಅನುಭವವು ಎಲ್ಲ ಇಂದ್ರಿಯಗಳ ಕಟು-ಮಧುರ ಅನುಭವಗಳ ಸಂಕೀರ್ಣ ಹೆಣಿಗೆಯಲ್ಲವೇ? ನಾವು ನಮ್ಮ ವ್ಯಕ್ತಿತ್ವದ ಗಡಿಗೆರೆಗಳನ್ನು ದಾಟಿ, ಬೇರೊಂದರಲ್ಲಿ, ಕಳೆದುಹೋಗುವ ಆ ಪರಿ ಈ ಲೋಕದ ಎಷ್ಟು ಜನರಿಗೆ ಎಷ್ಟು ಬಾರಿ ಆದೀತು? ಬಹಳ ಬಹಳ ಅಪರೂಪ.
 
 
ನಮ್ಮ ಬಾಲ್ಯಾನುಭವಗಳ ಲೋಕದ ಮರುಕಳಿಕೆಯೂ ಹಾಗೆಯೇ. ಅವು ಮೂಡುವುದು ಇಂದ್ರಿಯಗಳ ಅನುಭವದ ಮರುಸೃಷ್ಟಿಯಾಗಿಯೋ ಅಥವಾ ಅವುಗಳನ್ನು ಮಾತುಗಳಲ್ಲಿ ಕಟ್ಟಿರುವ ‘ನೆನಪು’ ಆಗಿಯೋ ನೀವೇ ಹೇಳಿ. ಆ ನೆನಪುಗಳನ್ನು ಬೇರೆಯವರಿಗೆ ಹೇಳಿದಾಗ ಅಲ್ಲ, ಸ್ವತಃ ನಾವೇ ಒಳಗಿನಿಂದ ಹೊರಗೆ ತಂದುಕೊಂಡಾಗ ನಿಜಕ್ಕೂ ಏನಾಗುತ್ತದೆ. ನಿಮಗೂ ಗೊತ್ತು. ಈಗ ಮೂಸುವ ಯಾವುದೋ ಗಂಧ, ಕೇಳುವ ಯಾವುದೋ ನಾದ, ಕಳೆದ ಅನುಭವಗಳ ಲೋಕಕ್ಕೆ ಲಗ್ಗೆಹಾಕಿ, ಮರೆತು ಮಲಗಿದ್ದ ಯಾವುದೋ ಲೋಕವನ್ನು ಮತ್ತೆ ಹುಟ್ಟಿಸುತ್ತದೆ. ಇಂಥ ಅನುಭವಗಳು ಎಲ್ಲಿ ಸ್ಟೋರ್ ಆಗಿರುತ್ತವೆ? ನಮ್ಮ ಮೆದುಳಿನಲ್ಲಿ ಬೇರೆ ಬೇರೆ ಇಂದ್ರಿಯಗಳ ಅನುಭವದ ದಾಖಲಾತಿ ಮತ್ತು ಸಂಗ್ರಹಕ್ಕೆಂದು ಮೀಸಲಾಗಿರುವ, ಜಾಗಗಳಲ್ಲಿಯೋ ಅಥವಾ ಭಾಷಿಕ ನೆನಪುಗಳ ಭಂಡಾರವೊಂದು ಇದೆಯೋ. ನಾವು ಯಾವಾಗಲೂ ಅನುಭವಗಳನ್ನು ಭಾಷೆಗೆ ಅನುವಾದ ಮಾಡಿಕೊಳ್ಳುತ್ತಿರುತ್ತೇವೆಯೇ? 
 
 
ಅದಿರಲಿ, ಈ ರೀತಿಯ ಅನುಭವಗಳನ್ನು ಪಡೆಯುವಾಗ ನಮ್ಮ  ಮೈ, ಮನಸ್ಸು ಮತ್ತು ಪ್ರಜ್ಞೆಗಳ ನಡುವಿನ ಸಂಬಂಧ ಹೇಗಿರುತ್ತದೆ ಎಂಬುದು ನಾನು ಇಲ್ಲಿ ಹುಡುಕುತ್ತಿರುವ ವಿಷಯ. ಅನುಭವದ ತೀವ್ರತೆಯನ್ನು ಹೇಳುವಾಗ, ತಲ್ಲೀನವಾಗುವುದು, ಮೈಮರೆಯುವುದು ಎಂಬ ಪದಗಳನ್ನು ನಾವು ಬಳಸುತ್ತೇವೆ. ನಿಜಕ್ಕೂ ಮರೆಯಬೇಕಾದ್ದು ಮನವನ್ನೋ ಮೈಯನ್ನೋ? ಕುವೆಂಪು ಅವರು ತಮ್ಮ ‘ಹಸುರು’ ಎಂಬ ಕವಿತೆಯಲ್ಲಿ ಹೀಗೆ ಹೇಳುತ್ತಾರೆ:
 
 
‘ಹಸುರಿತ್ತಲ್ ಹಸುರತ್ತಲ್
ಹಸುರೆತ್ತಲ್ ಕಾಡಿನಲಿ
ಹಸುರಾದುದೊ ಕವಿಯಾತ್ಮಂ
ಹಸುರ್ನೆತ್ತರ್ ಒಡಲಿನಲಿ’  
 
ಎಂದು ಬರೆಯುತ್ತಾರೆ. ಅಂತೆಯೇ ಗಗನವನ್ನು ಮೈನೀಲಿಗಟ್ಟುವವರೆಗೆ ನೋಡಬೇಕೆಂದು ಹೇಳುತ್ತಾರೆ. ಇಂಗ್ಲಿಷ್ ಕವಿಯಾದ ಎಜ್ರಾ ಪೌಂಡ್ ಕೂಡ,
 
 
 ‘I stood amidst the wood and was wood’ ಎನ್ನುತ್ತಾನೆ. ಹೀಗೆ ಅನುಭವದಲ್ಲಿ ಮೈಮರೆತಿರುವಾಗ ನಮ್ಮ ಮನಸ್ಸು ಏನು ಮಾಡುತ್ತಿರುತ್ತದೆ ಎನ್ನುವುದು ಮುಖ್ಯವಾದ ಪ್ರಶ್ನೆ. ಅದು ಆಲೋಚನೆಯಲ್ಲಿ ತೊಡಗಿರುವುದೇ? ತೊಡಗಿರಬೇಕೇ, ಆ ಅನುಭವನ್ನೇ ಕುರಿತು, ಆಗಲೇ ಯೋಚಿಸತೊಡಗಿದರೆ, ಅನುಭವದ ತೀವ್ರತೆಗೆ ಭಂಗ ಬರುತ್ತದೆಯೇ? ಆ ಅನುಭವವನ್ನು ಕುರಿತ ಹಾಗೆ ನಮ್ಮ ಮನಸ್ಸಿನಲ್ಲಿ ಅದುವರೆಗೆ ಮನೆಮಾಡಿದ್ದ ವಿಚಾರಗಳು, ಪೂರ್ವಾಗ್ರಹಗಳು, ಭಯಗಳು ಮತ್ತು ಆತಂಕಗಳು ಅನುಭವದ ಸ್ವರೂಪವನ್ನು ಬದಲಿಸುವುದಿಲ್ಲವೇ. ‘ಸ್ವ-ಪ್ರಜ್ಞೆ’ ಎನ್ನುವುದೇ ತಲ್ಲೀನತೆಯ ಶತ್ರುವಾಗಿಬಿಡುವುದೆ? ಅಂತಹ ಪ್ರಜ್ಞೆಯಿಲ್ಲದ ಪ್ರಾಣಿಗಳ ಅನುಭವವು ಮನುಷ್ಯರದಕ್ಕಿಂತ ತೀವ್ರವೇ. ಭೂತಕಾಲ ಮತ್ತು ಭವಿಷ್ಯತ್ ಕಾಲಗಳ ಬಗ್ಗೆ ನಮಗಿರುವ ತಿಳಿವಳಿಕೆಯೇ ಅನುಭವದ ಸವಿಯನ್ನು ಹಾಳುಮಾಡುತ್ತದೆಯೇ? ಅನುಭವ ಆಗಿಹೋದ ನಂತರ, ಅದರ ಬಗ್ಗೆ ಆಲೋಚನೆ ಮಾಡುವುದು ಬೇರೆ. ಅನುಭವವನ್ನು ಪಡೆಯುತ್ತಿರುವಾಗಲೇ ಅದರ ಬಗ್ಗೆ ಆಲೋಚನೆ ಮಾಡುವುದು, ಮಾತನಾಡುವುದು ಬೇರೆ. ಕೆಲವರಂತೂ ‘ಆಹಾ, ಎಷ್ಟು ಚೆನ್ನಾಗಿದೆ!’ ಎಂದು ಅನುಭವಕ್ಕೆ ಮಾತಿನ ಸರ್ಟಿಫಿಕೇಟ್ ಕೊಡುತ್ತಿರುತ್ತೇವೆ. ಬೇರೆ ಕೆಲವರು ಕಂಡುದನ್ನು ಕ್ಯಾಮರಾಗಳಲ್ಲಿ ಸೆರೆಹಿಡಿಯುವ ಹಪಹಪಿಯಲ್ಲಿ ಮುಳುಗಿಹೋಗಿ ಅನುಭವದ ಕ್ಷಣಗಳನ್ನೇ ಕಳೆದುಕೊಳ್ಳುತ್ತಾರೆ. ಇದೆಲ್ಲವೂ ಅನುಭವಗಳಿಂದ ಮಾಡುವ ಪಲಾಯನವೇ ಅಲ್ಲವೇ?     
 
 
ನಾವು ಮನಮರೆತು ಮೈನೆಲೆಯಲ್ಲಿ ಮಾತ್ರ ಅನುಭವ ಪಡೆಯುವುದು ಸಾಧ್ಯವಾದರೆ ಏನಾಗುತ್ತದೆ? ಈ ಸ್ಥಿತಿಯನ್ನು ಕುಮಾರವ್ಯಾಸನು ಅದ್ಭುತವಾಗಿ ಹೇಳಿದ್ದಾನೆ. ಶಾಪಗ್ರಸ್ತನಾಗಿ ಕಾಡಿನಲ್ಲಿದ್ದ ಪಾಂಡುರಾಜನು ಮಾದ್ರಿಯ ರೂಪಕ್ಕೆ ಮರುಳಾಗಿ ಶಾಪದ ಸಂಗತಿಯನ್ನೇ ಮರೆತು ಅವಳನ್ನು ಕೂಡುತ್ತಾನೆ. ಆಗಿನ ಅವನ ಸ್ಥಿತಿಯನ್ನು ಕವಿಯು ‘ಪ್ರಜ್ಞೆ ಜಾನ್ವಂಘ್ರಿಕಟಿ ಪರಿಮಿತವಾಯ್ತು’ ಎಂದು ವರ್ಣಿಸುತ್ತಾನೆ. (ಪ್ರಜ್ಞೆಯು ಮೊಣಕಾಲು, ಕಾಲು ಮತ್ತು ಸೊಂಟಗಳಿಗೆ ಸೀಮಿತವಾಯಿತು.) ಶಾಪದ ಭಯವಿಲ್ಲದಾಗಲೂ ಸಂಭೋಗದ ಸುಖವು ಈ ರೀತಿಯ ತಲ್ಲೀನತೆಯನ್ನು ಅವಲಂಬಿಸುತ್ತದೆಯೇ? ಆಗ ವ್ಯಕ್ತಿಗೆ ತನ್ನ ಜೊತೆಗಾತಿ/ಜೊತೆಗಾರ ಜೀವಗಳ ಬೇಕುಬೇಡಗಳ ಬಗೆಗಿನ ಆಲೋಚನೆ ಇರುವುದೇ, ಇರಬೇಕೇ, ಇರಬಾರದೇ. ಅಥವಾ ಅದು ನಾನು-ನೀನು ಎಂಬ ಪರಸ್ಪರ ವ್ಯತ್ಯಾಸವೇ ಅಳಿದುಹೋದ ಒಂದುತನದ ಸ್ಥಿತಿಯೋ? ಆಗ ಬೇಂದ್ರೆಯವರು ಹೇಳಿದ ಹಾಗೆ ಇಬ್ಬರಿಗೂ ನಾಲ್ಕು ಕೈಗಳಿರುತ್ತವೆಯೇ? ಇಂತಹ ಸ್ಥಿತಿಯು, ನಿಜದಲ್ಲಿ ಪಡೆದುಕೊಳ್ಳಬಹುದಾದ ವಾಸ್ತವವೋ ಅಥವಾ ಮಿಂಚಿ ಮಾಯವಾಗುವ ಆದರ್ಶವೋ? ಉತ್ತರಗಳಿಗಿಂತ ಪ್ರಶ್ನೆಗಳೇ ಹೆಚ್ಚು.
 
 
ಇದೇ ಮಾತನ್ನು ಬೇರೆ ಅನುಭವಗಳಿಗೂ ಅನ್ವಯಿಸಬಹುದು. ಎಲ್ಲ ಕಡೆಯೂ ‘ಅರಿಯುವಿಕೆ’ ಮತ್ತು ‘ಇರುವಿಕೆ’ಗಳ ನಡುವಿನ ದ್ವಂದ್ವವು ನಮ್ಮನ್ನು ಕಾಡುತ್ತದೆ. ಯಾವುದೇ ಸಂಗತಿಯನ್ನು ಅರ್ಥ ಮಾಡಿಕೊಳ್ಳಬೇಕು, ತಿಳಿಯಬೇಕು ಎನ್ನುವ ಒತ್ತಡವೇ, ಅಪೇಕ್ಷೆಯೇ ಇರುವಿಕೆಯ ಸುಖಕ್ಕೆ ಅಡ್ಡಿಯಾಗುತ್ತದೆಯೇ? ಮತ್ತೆ ಕುವೆಂಪು ನೆನಪಾಗುತ್ತಾರೆ. ಅವರು ಪ್ರಾಣಿಗಳಿಗೂ ಮನುಷ್ಯರಿಗೂ ಹೋಲಿಕೆ ಮಾಡುತ್ತಾರೆ. ದನಕರುಗಳು ಸುಮ್ಮನೆ ಮೇಯುತ್ತಿರುತ್ತವೆ. ಅವಕ್ಕೆ ಅರಿಯುವ ಗೋಜು ಇಲ್ಲ. ಮನುಷ್ಯನಿಗೆ ಮಾತ್ರ ಈ ಗೋಜು.
 
 
"ನಾ ಮನುಜನು ಎನ್ನೆದೆಯಲ್ಲಿ ಅರಿವೆನ್ನುವ ಬಾವು
ನೋವಾಗಿರೆ, ಕೀವಾಗಿರೆ ಬಾಳ್ಬೆಲ್ಲವೆ ಬೇವು..
ಅರಿವಾಸೆಯ ಬಿಡು ಇರುವಾಸೆಯ ತೊಡು
ಅರಿವಾಸೆಯೆ ಮಾಯಾಬಂಧ, ಇರುವುದೆ ಮುಕ್ತಿಯ ಆನಂದ."
ಆದರೆ, ಹೀಗೆ ಅರಿಯದೆ ಸುಮ್ಮನೆ ಇರುವ ಸ್ಥಿತಿಯು ಸ್ವತಃ ಕುವೆಂಪು ಅವರಿಗಾದರೂ ಸಾಧ್ಯವಾಯಿತೇ? ಹೇಳುವುದು ಕಷ್ಟ.
 
ಹಾಗೆ ನೋಡಿದರೆ, ಪಶ್ಚಿಮದ ಕೆಲವು ವಿದ್ವಾಂಸರು ಈ ಬಗ್ಗೆ ಭಿನ್ನವಾಗಿ ಆಲೋಚಿಸಿದ್ದಾರೆ. ಉದಾಹರಣೆಗೆ ಫ್ರಾನ್ಸ್ ದೇಶದ ಪ್ರಸಿದ್ಧ ಗಣಿತಶಾಸ್ತ್ರಜ್ಞ ಮತ್ತು ತತ್ವಜ್ಞಾನಿಯಾದ ಡೆಕಾರ್ಟೆಸ್, ಬಹಳ ಪ್ರಸಿದ್ಧವಾದ ‘I think, therefore I am’ ಎಂಬ ಮಾತನ್ನು ಹೇಳಿದ್ದಾನೆ. ‘ನಾನು ಆಲೋಚನೆ ಮಾಡುತ್ತೇನೆ ಎನ್ನುವುದೇ ನಾನು ಬದುಕಿರುವುದಕ್ಕೆ ಸಾಕ್ಷಿ’ ಎಂದು ಈ ಮಾತಿನ ಅರ್ಥ. ಆಲೋಚನೆ ಮಾಡದವನು ಮನುಷ್ಯನೇ ಅಲ್ಲ ಎಂದು ಅವನ ಅಭಿಪ್ರಾಯ. ನಮಗೂ ಹಾಗೆಯೇ ಅನ್ನಿಸಬಹುದೇ? ಪ್ರಾಣಿಗಳಿಗೂ ಮನುಷ್ಯನಿಗೂ ಇರುವ ವ್ಯತ್ಯಾಸವು, ಆಲೋಚನಾಶಕ್ತಿ ಹಾಗೂ ಬುದ್ಧಿಶಕ್ತಿಗಳೇ ಎಂದು ನಾವು ಹೇಳುತ್ತೇವೆ. ಆದರೆ ಬುದ್ಧಿವಂತರೆನಿಸಿಕೊಂಡವರು ತಮ್ಮ ಬದುಕುಗಳನ್ನು ನಿರ್ವಹಿಸುತ್ತಿರುವ ಬಗೆಯು ಶೋಚನೀಯವಾಗಿದೆಯಲ್ಲಾ! ಅದು ಹೋಗಲಿ ಎಂದರೆ, ಈ ಬುದ್ಧಿವಂತರು ಸಮಾಜಗಳ, ದೇಶಗಳ ಬದುಕನ್ನೇ ಅವನತಿಯ ಕಡೆಗೆ ಕರೆದೊಯ್ಯುತ್ತಿರುವರಲ್ಲಾ! ಇಂತಹ ಆಧುನಿಕ ಭಸ್ಮಾಸುರರನ್ನು ಮ್ಯಾನೇಜ್ ಮಾಡುವುದು ಹೇಗೆ? ಯಾರು?
 
 
ಆದ್ದರಿಂದಲೇ ಮನುಷ್ಯನ ನಾಗರಿಕತೆಯ ಬೆಳವಣಿಗೆಯ ದಿಕ್ಕಿಗೂ, ಮನುಷ್ಯನ ಅಂತರಂಗದ ವಿಷಾದಕ್ಕೂ ಹತ್ತಿರದ ಸಂಬಂಧವಿದೆಯೇ ಎಂಬ ಅನಿಸಿಕೆ ಮೂಡುತ್ತದೆ. ನಾವು ಮುಂದಿನ ಹೆಜ್ಜೆಯೆಂದು ಇಟ್ಟಿದ್ದು, ಹಿಂದಿನ ಹೆಜ್ಜೆಯಾಗಿಬಿಟ್ಟಿದೆಯೇ? ನಾವು ಮತ್ತು ನಮ್ಮ ನಾಗರಿಕತೆಯು ವಾಪಸ್ ಹೋಗಲು ಸಾಧ್ಯವಿಲ್ಲದ ಸ್ಥಿತಿಯನ್ನು ತಲುಪಿ ದಶಕಗಳೇ ಕಳೆದಿವೆಯೇ?
 
 
ಮಾತು ಎಲ್ಲಿಂದ ಎಲ್ಲಿಗೋ ಹೋಯಿತು. ಆದರೆ, ಮೂಲ ಪ್ರಶ್ನೆ ಅದೇ? ಬುದ್ಧಿ ಮತ್ತು ಭಾವನೆ ಎರಡೂ ಕೂಡ ಇಂದ್ರಿಯಗಳಿಂದ ಪಡೆಯಬಹುದಾದ ಅನುಭವಗಳ ತೀವ್ರತೆಗೆ ಅಡ್ಡಿಯಾಗುವ ಸಂಗತಿಗಳೇ? ಮನುಷ್ಯ ಮತ್ತು ವಸ್ತುಗಳ ನಡುವಿನ ಸಂಬಂಧಕ್ಕೂ ಮತ್ತು ಮನುಷ್ಯ ಹಾಗೂ ಮನುಷ್ಯರ ಸಂಬಂಧಕ್ಕೂ ಅಂತರ ಇದೆಯೇ. ಉದಾಹರಣೆಗೆ ಮಲ್ಲಿಗೆಯನ್ನು ಮೂಸುವ ಹಾಗೆ, ಜಿಲೇಬಿಯನ್ನು ತಿನ್ನುವ ಹಾಗೆ, ಮನುಷ್ಯರ ಜೊತೆಯಲ್ಲಿಯೂ ವರ್ತಿಸಲು ಸಾಧ್ಯವೇ, ಸಾಧುವೇ? ಕೆಲವರು ಹಾಗೆಯೇ ಇರುತ್ತಾರೆಯೇ. ಭಾವದ ಜೊತೆ ಮತ್ತು ಬುದ್ಧಿಯ ಹಿನ್ನೆಲೆ ಎರಡೂ ಇಲ್ಲದೆ, ಮನುಷ್ಯನಿಗೆ ಏನೂ ದಕ್ಕುವುದಿಲ್ಲ ಎನ್ನುವುದೇ ನಿಜವಾದರೆ, ತಲ್ಲೀನವಾದ, ಸಮಗ್ರವಾದ ಅನುಭವ ಎನ್ನುವುದು ಕೊನೆಗೂ ಬಿಸಿಲುಗುದುರೆಯೇ? ಮನುಷ್ಯನ ವಿಷಾದದ ಮೂಲವು ಇಲ್ಲಿದೆಯೇ? ನಮ್ಮ ಲೋಕದಲ್ಲಿ ಅಲ್ಲ, ಮನುಷ್ಯರಾಗಿ ನಾವು ಲೋಕವನ್ನು ಪಡೆಯುವ ಬಗೆಯಲ್ಲಿಯೇ ಅಸಮಾಧಾನದ, ಅಪೂರ್ಣತೆಯ, ಪ್ಯಾಶನೇಟ್ ಅಗದೆ ಬದುಕುವುದರ ಮೂಲಕಾರಣವೂ ಇದೆಯೇ.
 
 
ಉತ್ತರ ನನಗಂತೂ ಗೊತ್ತಿಲ್ಲ. ಗೊತ್ತಿದ್ದರೆ ನಾನೂ ಮನುಷ್ಯನಾಗದೆ ದೇವರೇ ಆಗಿಬಿಡುತ್ತಿದ್ದೆ.(ಅಂದಹಾಗೆ ಆ ದೇವರುಗಳು ಹೇಗೆ ಇರುತ್ತಾರೆ?) ನಿರ್ಲಿಪ್ತರಾಗಿಯೋ ಅಥವಾ ಭಾವುಕರಾಗಿಯೋ? ಪು.ತಿ.ನ. ಅವರ ಅಹಲ್ಯೆ ನಾಟಕದಲ್ಲಿ ಬರುವ ದೇವತೆಗಳಂತೂ ಯಾವ ಲಜ್ಜೆಯೂ ಇಲ್ಲದೆ,
 
‘ನಿರ್ಜರರಾವೆಮಗೇತರ ಭೀತಿ, ಸತತ ಬಿನದವೇ ನಮ್ಮಯ ರೀತಿ’ ಎನ್ನುತ್ತಾರೆ. ‘ಮೊದಲಿಳೆಯ ಮಡದಿಯರು ಸಲುವರಮರರಿಗೆ’ ಎಂದು ಡಿಮ್ಯಾಂಡ್ ಮಾಡುತ್ತಾರೆ. ಮುಪ್ಪಿಲ್ಲದ ರೋಗವಿಲ್ಲದ ಆ ಸ್ಥಿತಿಗೆ ಅಹಂಕಾರ ಮತ್ತು ಆತ್ಮವಿಶ್ವಾಸಗಳೇ ಮೂಲವಾದವು. ಬೇಂದ್ರೆಯವರು ಇದನ್ನು ‘ಅಮೃತದ ತೇಗಿನ ಮದ’ ಎಂದು ಕರೆದರು. ಮುಪ್ಪು, ರೋಗ, ದೈಹಿಕ ಅಸಮಾನತೆ ಮಾನಸಿಕ ಕುಗ್ಗುವಿಕೆಗಳಿಂದ ತುಂಬಿದ ನಮಗೆ ‘ಸತತ ಬಿನದ’ (ಕೊನೆಮೊದಲಿಲ್ಲದ ಸಂತೋಷ) ಎನ್ನುವುದು ಸಾಧ್ಯವಿಲ್ಲದ ನಿರೀಕ್ಷೆ. ಹಾಗೆ ನೋಡಿದರೆ, ದೇವತೆ ಎನ್ನುವ ಕಲ್ಪನೆಯೇ ಮನುಷ್ಯರ ಕನಸು ಇರಬೇಕು.
 
 
ನಮಗೆ ಮನುಷ್ಯರಿಗೆ, ಅನುಭವದ ತಣಿಯುವಿಕೆಯು, ಬಾಯಾರಿಕೆಯನ್ನು ಹಿಂಗಿಸುವುದಿಲ್ಲ. ಅದು ಮರಳಿನಲ್ಲಿ ಸುರಿದ ನೀರಿನಂತೆ ಇಂಗಿಹೋಗುತ್ತದೆ. ನಾವು ಮತ್ತೆ ಹೊಸ ಬಾಯಾರಿಕೆಯೊಂದಿಗೆ ಹೊಸ ನೀರಿಗಾಗಿ ಹಾತೊರೆಯುತ್ತೇವೆ. ಸಂಸ್ಕೃತದಲ್ಲಿ ಹೀಗೆ ಹೇಳುತ್ತಾರೆ: ಭೋಗದ ಬಯಕೆಯು ಉಪಭೋಗದಿಂದ ತಣಿಯುವುದಿಲ್ಲ. ನಮ್ಮ ಈ ಕಾಲದಲ್ಲಿ, ಕೊಂಡುಕೊಳ್ಳುವ ದಾಹದೊಂದಿಗೆ, ಒಂದು ಸೂಪರ್ ಬಜಾರಿನಿಂದ ಇನ್ನೊಂದಕ್ಕೆ ತಿರುಗುತ್ತಿರುವ ನಮಗೆ ಈ ಮಾತು ಒಂದು ಪಾಠ.
 
 
 
 
 

 

 
 
 
 
 
Copyright © 2011 Neemgrove Media
All Rights Reserved