ನೆನಪಿನಂಗಳದಿಂದ...
ಡಾ. ರಾಜೇಗೌಡ ಹೊಸಹಳ್ಳಿ
(ಅಲ್ಲಲ್ಲಿ ಅಷ್ಟಷ್ಟನ್ನು ಹೆಕ್ಕುತ್ತಾ ಪೋಣಿಸುತ್ತಿರುವ ಮಾಲೆ)
೧. ಇದು ಗಂಧದ ಕ್ವಾಟೆ ಅಲ್ಲವೇನ್ಲಾ!
ನನ್ನಜ್ಜ ಘಾಟಿ ಮುದುಕ. ಕಾಸುಕಾಸು ಸೇರಿಸಿ ಸೇರಿಸಿ ಬದುಕಿದೋನಲ್ಲವೇ! ಸತ್ಯಮಂಗಲದ ಶಾನುಭೋಗ 'ಹೇ ಗೌಡ ಬಾರೋ ಇಲ್ಲಿ...ಆ ಸಾಲಗಾಮೆ ಗೇಟ್ ತವಾ ಇರೋ ನನ್ನ ಐದು ಎಕರೆ ಜಾಗ ಖರೀದಿಗೆ ತಗಳೋ ೫೦ ರೂಪಾಯಿ ಕೊಡೋ ಸಾಕು’ ಅಂದಿದ್ದಾಗ ನನ್ನಜ್ಜ ’ಹೇ ಹೋಗ್ರಿ ಹೋಗ್ರಿ ಆ ಕತ್ತೆ ಮೇಯೋ ಜಾಗಕ್ಕೆ ೫೦ ರೂಪಾಯೋ!’ ಅಂದಿದ್ದನಂತೆ. ಅಜ್ಜ ’ಈಗ ನೋಡು...ಕ್ರಿಸ್ತರು ಇಸ್ಕೂಲ್ ಮಾಡಿಲ್ವೆ ಅದೇ ಜಾಗ ಇದು (ಹಾಸನ ಸಂತ ಜೋಸೆಫ ಶಾಲಾ ಆವರಣ) ಈಗ ಅದೇ ಜಾಗ ಎಕ್ರಗೆ ಐದು ಲಕ್ಷ ಆಗಿದೆ ಅಂತೀನಿ!’ ಎಂದೆಲ್ಲಾ ಜಾರಿ ಹೋದ ಕಾಲ ನೆನಪಿಸಿಕೊಳ್ಳುತ್ತಿದ್ದ.
ಈ ನನ್ನಜ್ಜನಿಗೆ ಕಣ್ಣು ಮಬ್ಬಾದಾಗ, ನಡೀಲಾ ಹುಡುಗ ಹಾಸನದ ಸಾಲಗಾಮೆ ಗೇಟಲಿ ಒಳ್ಳೆ ಡಾಕುಟರ್ ಇದಾರಂತೆ ಅಂತಾ ನನ್ನ ಕರೆದುಕೊಂಡು ಹೊರಟ. ಬಸ್ಸು ಇಳಿದು ನಡಿಸ್ಕೊಂಡು ಹೋಗ್ತಾ ಇದ್ನಾ...’ಎಲಾ ಹುಡುಗ! ಗಂಧದ ಕ್ವಾಟೆ ಬಂತಲ್ಲವೇನ್ಲಾ!' ಅಂದಿದ್ದ. ’ಅಯ್ ಎಲ್ಲಯ್ಯ! ಇದು ಎವಿಕೆ ಕಾಲೇಜು ಅಲ್ಲವೇನಯ್ಯ... ಬಸ್ ಸ್ಟಾಂಡ್ ಇದಿರಿಗೆ ಇದೆ’ ಅಂದೆ. ’ಮತೇ ಘಂ ಅಂತಾ ವಾಸನೆ ಬರ್ತದೆ...ಹೂಂ...ನೋಡೂ...ಘಂ ಅನ್ನಲ್ಲವೆ’ ಅಂತಾ ಮತ್ತೆ ಅಂದಿದ್ದ ನನ್ನ ಅಜ್ಜ! ’ಇಲ್ಲಿ ಕಾಲೇಜು ಹುಡುಗೀರು ಅತ್ತ ಇತ್ತ ಹೋಗ್ತ ಇದಾರೆ ಕಣಯ್ಯ, (ಅಜ್ಜನನ್ನು 'ಅಯ್ಯ' ಎಂದು ಕರೆವುದು ನಮ್ಮ ಕಡೆ ರೂಢಿ) ಪೌಡರು ಸ್ನೋ ವಾಸ್ನೆ...’ ಅಂದೆ. ’ಹಂಗನ್ನು ಮತ್ತೇ!’ ಅಂದು ನನ್ನಜ್ಜ ಹೆಜ್ಜೆ ಹಾಕುತ್ತಿದ್ದ. ನಾನು ಕಣ್ಣು ಕಾಣದೆ ಕೋಲೂರುತ್ತಾ ನಡೆವಾ ಅಜ್ಜನ ನಡೆಸ್ತಾ, ಅವನ ಒತ್ತಿಲಿ ಬೇಕಾದಂತಹ ಹುಡುಗೀರ ನೋಡ್ತಾ ಇದ್ದೆ...
೨. ತಾಲ್ಲೂಕು ಕಛೇರಿಲಿ ಈ ಕಡೆ ಸಬ್ರಿಜಿಸ್ಟ್ರಾರ್ ಕಛೇರಿ, ಆ ಕಡೆ ತಾಲ್ಲೂಕು ಕಛೇರಿ. ಆಗಿನ ಕಾಲದಲ್ಲಿ ಅಮಲ್ದಾರರಿಗೆ ಒಬ್ಬರಿಗೇ ಅಲ್ಲವೇ ಫೋನು...ಒಂದು ದಿನ ಸಬ್ರಿಜಿಸ್ಟ್ರಾರ್ ಕೇಶ್ವೇಗೌಡರಿಗೆ ಇದೇ ಜಗದ್ವಿಖ್ಯಾತ ಬೇಲೂರು ಶಿಲಾಬಾಲಿಕೆಯರಿರುವ ಬೇಲೂರಿನ ತಾಲ್ಲೂಕು ಕಛೇರಿಗೆ ಫೋನು ಬರಬೇಕೆ! ’ಹೇ ಹೋಗೋ ಫೋನ್ ಬಂದಿದೆ...ಸಬ್ರಿಜಿಸ್ಟ್ರಾರರನ್ನ ಕರಿ’ ಎಂದು ಸರ್ಕಾರೀ ಪೇಟ ಕೋಟು ಹಾಕಿದ್ದ ಸಿಪಾಯಿಗೆ ಅಮಲ್ದಾರರು ಹುಕುಂ ಮಾಡಿದರು. ಫೋನು ಬಂದಿರುವುದ್ ಕೇಳಿ ಇದೇನಪ್ಪಾ ಗ್ರಾಚಾರ ಅಂತಾ ಅಂಜುತ್ತ ಬೆಚ್ಚುತ್ತ ಕೇಶ್ವೇಗೌಡರು ಬಂದವರೇ ಟೇಬಲ್ ಮೇಲಿದ್ದ ರಿಸೀವರನ್ನು ಉಲ್ಟಾ ಹಿಡಿದು ಹಲ್ಲೋ ಹಲ್ಲೋ ಎಂದರೆ ಫೋನು ಕಿವಿಗೆ ಮುಟ್ಟೋದುಂಟೆ! ’ಏನ್ರಿ...ಹೀಗ್ರಿ ಹಿಡಿಯೋದು...’ ಎನ್ನುತ್ತ ಅಮಲ್ದಾರ್ರು ಕೇಶ್ವೇಗೌಡರಿಗೆ ಫೋನ್ ತಿರುಗಿಸಿ ಕೊಟ್ಟರು. ಅಷ್ಟೊತ್ತಿಗೆ ಫೋನು ಕಟ್ಟಾಗಿತ್ತು. ಅಂದಿನಿಂದ ಗೌಡರಿಗೆ ಫೋನು ಬಂದಿದೆ ಎಂದು ಕೇಳಿದಾಕ್ಷಣ ನಡುಕ ಬಂದು ಬಿಡುತ್ತಿತ್ತು. ಬಾರೋ ಬಾರೋ ಫೋನು ಬಂದಿದೆಯಂತೆ ಎಂದು ಗುಮಾಸ್ತ ಸಿದ್ದಯ್ಯನನ್ನು ಕರೆದುಕೊಂಡು ಬರುತ್ತಿದ್ದರು. ಸ್ವಲ್ಪ ಫೋನು ಮಾಡಿ ಗೊತ್ತಿದ್ದ ಸಿದ್ದಯ್ಯ ಹಲೋ ಎಂದು ಮಾತಾಡಿ ಫೋನನ್ನು ಇವರಿಗೆ ಕೊಟ್ಟರೆ ಮಾತ್ರ ಹಂಗೂ ಹಿಂಗೂ ಮಾತಾಡ್ತಾಯಿದ್ದರು.
೩. ಇಬ್ಬರು ನಾಡೋಜರುಗಳ ನೆನಪು: ಹಾಸನ ಮೂಲದಲ್ಲಿ ಸ್ವಾತಂತ್ರ ಹೋರಾಟಗಾರರು ಹಾಗೂ ಸಕಲೇಶಪುರ ಕ್ಷೇತ್ರದ ಎಂ.ಎಲ್.ಎ. ಆಗಿದ್ದವರು ಬೋರಣ್ಣಗೌಡರು. ಇವರ ಸ್ನೇಹಿತರು ಹರಿಜನ ಮುಂದಾಳು ಹಾಗೂ ಎಂ.ಎಲ್.ಎ. ದಡ್ರಿ ಸಿದ್ದಯ್ಯನವರು. ಈ ಸಿದ್ದಯ್ಯನವರ ಅಳಿಯ ಬೇಲೂರು ಎಂ.ಎಲ್.ಎ. ಆಗಿದ್ದ ಲಕ್ಷ್ಮಣಯ್ಯನವರು. ಇಂತಹವರೆಲ್ಲಾ ಆಗಿನ ಸ್ವಾತಂತ್ರ ಭಾರತದಲ್ಲಿ ನಮ್ಮಪ್ಪನವರ ಸ್ನೇಹಿತರಾಗಿದ್ದ ಮೇಲೆ ನನಗೆ ಕೆಲಸ ಸಿಕ್ಕಲಾರಲಾದೀತೆ ! ೧೯೭೪-೭೫ ಲೆಕ್ಚರರ್ ಇಂಟರ್ವ್ಯೂ ಬಂತು. ಮಾನ್ಯ ಹೆಚ್. ಎಲ್. ನಾಗೇಗೌಡರು ಕೆಪಿಎಸ್ಸಿ ಮೆಂಬರ್ ಆಗಿದ್ದರು. ಕನ್ನಡ ಎಂ.ಎ. ಅಂದರೆ ಲೆಕ್ಚರರ್ ಆಗುವುದಲ್ಲವೆ ಎಂಬ ತಿಳಿವಳಿಕೆ ನಮ್ಮಂತವರಲ್ಲಿ ಇತ್ತು. ನನ್ನಪ್ಪನೊಡನೆ ನಾನು ಮೊದಲ ಸಲ ಮಾಯಾವಿ ಬೆಂಗಳೂರಿಗೆ ಬಂದಿಳಿದೆ. ಈಚೆಕಡೆ ಸೆಂಟ್ರಲ್ ಜೈಲು ಆಚೆಕಡೆ ಎಂ.ಎಲ್.ಎ. ಗಳು ವಾಸ ಮಾಡೋ ಜನರಲ್ ಹಾಸ್ಟೆಲು. ಅಲ್ಲಿ ಮಾನ್ಯ ಹೆಚ್.ಡಿ. ದೇವೇಗೌಡರ ಕೊಠಡಿಲಿ ಲಕ್ಷ್ಮಣಯ್ಯ ಇದ್ದರು. ಸಿ. ಎಂ. ಇಬ್ರಾಹಿಂ ಇದ್ದರು. ಶಿಫಾರಸು ಪತ್ರ ತಯಾರಾಯ್ತು. ವಿರೋಧ ಪಕ್ಷದ ನಾಯಕರಾಗಿದ್ದ ಹೆಚ್.ಡಿ. ದೇವೇಗೌಡರ ರುಜು ಬಿತ್ತು. ಶಿವಮೊಗ್ಗದ ಸರ್ಕಿಟ್ ಹೌಸ್ ಬಳಿ ಮಾರನೆ ದಿನ ಹೆಚ್. ಎಲ್. ನಾಗೇಗೌಡರ ಕೈಗೆ ಇಬ್ರಾಹಿಂ ಅವರು ನಮ್ಮೆದುರೇ ಪತ್ರ ಕೊಟ್ಟರು. ನಾಗೇಗೌಡರ ಕರೀಸೂಟಿನ ಕೋಟಿನ ಜೇಬು ನನ್ನ ಹಣೆಬರಹದ ಕಾಗದವನ್ನು ಗುಳುಂ ಎಂದು ನುಂಗೇಬಿಟ್ಟಿತು.
ನನ್ನ ಕನ್ನಡ ಎಂ.ಎ. ಯನ್ನು ಕ್ಯಾರೇ ಅನ್ನದ ಸ್ಥಿತಿ ಆಗಲೇ ಬರುತ್ತಿತ್ತು. ಆ ಹೊತ್ತಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಜಾನಪದ ಮಾಹಿತಿ ಸಂಗ್ರಹಕ್ಕೆಂದು ನಲವತ್ತೆರಡು ಜನರಲ್ಲಿ ಒಬ್ಬನಾಗಿ ಮೂರು ತಿಂಗಳ ಕೆಲಸಕ್ಕೆ, ಹೆಗಲಿಗೆ ಬ್ಯಾಗು ಹಾಕಿಕೊಂಡು ಹಾಜರಾದೆ. ಅದೇ ನಾಗೇಗೌಡರೇ ಅಲ್ಲಿ ಖುರ್ಚಿ ತುಂಬಾ ಕುಳಿತಿದ್ದಾರೆ! ಗಾಂಧಿ ಟೋಪಿಯ ಸರಳ ಮನುಷ್ಯ ಜಿ. ನಾರಾಯಣರು ಭಾಷಣ ಮಾಡುತ್ತಾ "ನೋಡಿ ನೀವು ಚೆನ್ನಾಗಿ ಹಳ್ಳಿಗೆ ಹೋಗಿ ಕೆಲಸ ಮಾಡಿ; ಏನಾದರೂ ಕೆಪಿಎಸ್ಸಿ ನಲ್ಲಿ ಇಂಟರ್ವ್ಯೂ ಬಂದರೆ ಈ ನಾಗೇಗೌಡರು ಸಹಾಯ ಮಾಡುತ್ತಾರೆ" ಎಂದು ಹೇಳಿ ಪುನ: ನೌಕರಿ ಆಸೆ ಹುಟ್ಟಿಸಿದರು. ಯಾರ ಪುಣ್ಯವೋ ಅಷ್ಟು ಜನರಲ್ಲಿ ಇಂಟರ್ವ್ಯೂ ನನಗೊಬ್ಬನಿಗೇ ಬರಬೇಕೆ! ಇಂಥಾ ಬೆಂಗಳೂರು ಮಹಾನಗರಿಯಲ್ಲಿ ಹಳ್ಳಿಯಿಂದ ಬಂದಿದ್ದ ನಾನು ಎಲ್ಲೂ ಕಳೆದುಹೋಗದೆ ಹನುಮಂತನಗರದ ಆಂಜನೇಯನ ಗುಡ್ಡದ ಬುಡದಲ್ಲಿದ್ದ ಜಿ. ನಾರಾಯಣ ಅವರ ಮನೆಗೆ ಹೋಗಿ ನಿಂತೇಬಿಟ್ಟೆ. ಹೇಗಿದ್ದರೂ ವಾಗ್ದಾನ ನೀಡದ್ದರಲ್ಲವೆ ! ಹೇಳಿದ ತಪ್ಪಿಗೆ ಶಿಫಾರಸ್ಸು ಮಾಡಬೇಕಲ್ಲಾ ಎಂಬ ಕಷ್ಟ ಅವರಿಗೆ ಬಂದುಬಿಟ್ಟಿತು.
ಮೀಟಿಂಗ್ ಮುಗಿಸಿ ಪರಿಷತ್ತಿನ ಒಳಾಂಗಣದಿಂದ ಈಚೆಗೆ ಬಂದ ನಾರಾಯಣರು ನನ್ನನ್ನು ಕಿರುಗಣ್ಣಲಿ ನೋಡಿ ನಾಗೇಗೌಡರಿಗೆ "ನೋಡಿ ನಿಮ್ಮ ಶಿಷ್ಯ" ಎಂದು ಚುಟುಕಾಗಿ ಹೇಳಿದರು. ಪರಿಷತ್ತಿನ ಗೇಟಿನ ಮುಂದೆ ಗೌಡರ ಕಪ್ಪು ಕಾರು ನಿಂತಿದೆ! ಕಪ್ಪು ಸೂಟಿನ ಅದೇ ಗೌಡರು ನಾನು ಅಚಾನಕ್ ಆಗಿ ಅವರ ಕೈಗೆ ನೀಡಿದ ನನ್ನ 'ಸತ್ಯಭೋಜರಾಜ' ಎಂಬ ಕೃತಿಯನ್ನು ನೋಡುತ್ತಲೇ ಕಣ್ಣೆತ್ತಿ ನನ್ನನ್ನು ಅಳೆದು ನೋಡಿದರು. ಜಾನಪದವೆಂಬ ಹೊಲದಲ್ಲಿ ಗೆಯ್ಯಿಸಿಕೊಳ್ಳುವ ಹೋರಿಯಂತೆ ನಾನು ಕಂಡಿರಬೇಕು! ’ಕೆಎಎಸ್, ತಗೊಳ್ರಿ ನೋಡೋಣ’ ಎಂದು ಮತ್ತೊಮ್ಮೆ ಅವಲೋಕಿಸಿ ನನ್ನ ಮನಸ್ಸನ್ನು ಅಳೆದರು. "ಇಲ್ಲಾ ಸಾರ್ ವಯಸ್ಸು 28 ಆಯ್ತು’ ಎಂದುಬಿಟ್ಟೆ. ’ಹೂಂ ನೋಡೋಣ’ ಎಂದು ಹೊರಟುಬಿಟ್ಟರು. ಅಲ್ಲೇ ಇದ್ದ ಗೊ.ರು. ಚ. ಅವರು ನಿಮ್ಮ ಕೆಲಸ ಆಯ್ತು ಬಿಡಿ ಎಂದು ಭವಿಷ್ಯ ನುಡಿದರು. ನಂತರ ಮೈಸೂರಿನ ಚಾಮುಂಡಿ ಗೆಸ್ಟ್ ಹೌಸ್ನಲ್ಲಿ ಇಂಟರ್ವ್ಯೂ ಇತ್ತು. ಮಜಭೂತಾದ ನಾಲ್ವರ ನಡುವೆ ನಾಗೇಗೌಡರು ಕುಳಿತಿದ್ದರು. ನನ್ನ ನೋಡಿದವರೇ ’ಹೂ ಬರಬೇಕು ಬರಬೇಕು ಕುಳಿತುಕೊಳ್ಳಿ, ಏನು ಮಾಡ್ತ ಇದೀರಿ, ಒಂದು ಪುಸ್ತಕ ಬರೆದಿದಿರಿ ಅಲ್ಲವೆ?’ ಎಂದು 'ಇದು ನನ್ನ ಕ್ಯಾಂಡಿಡೇಟ್' ಎಂಬಂತೆ ’ನಿಮಗೆ ಈ ಕೆಲಸ ಜಾನಪದಕ್ಕೆ ಹೇಗೆ ಅನುಕೂಲವಾಗುತ್ತೆ? ಪ್ರಶ್ನೆ ಹಾಕಿದರು. ’ಅದೇ ಸಾರ್ ಹಳ್ಳಿಯವರೆಲ್ಲಾ ಬರ್ತಾರೆ...ಹಂಗೇ ಹಿಂಗೆ...’ ಅಂತಾ ಉತ್ತರ ಹೇಳಿದೆ. ರಿಜಿಸ್ಟ್ರೇಷನ್ ಎಂದರೇನು? ಎಂತು? ಎಂದು ಗೊತ್ತಿಲ್ಲದ; ಇಂಥಾ ಕಛೇರಿಗಳು ಎಲ್ಲಿರುತ್ತವೆ ಹೇಗಿರುತ್ತವೆ ಎಂದೂ ತಿಳಿಯದ, ಮುಂದೇನು ಎಂದು ಅರಿವಿರದೆ ಕೆಲಸ ಸಿಕ್ಕಿದರೆ ಸಾಕು ಎಂದಷ್ಟೆ ಕಾತರದ ಹಳ್ಳಿ ಹುಡುಗನಾದ ನಾನು ಅಂದು ಅವರುಗಳ ಮುಂದೆ ಏನೋ ಉತ್ತರ ಹೇಳಿದ್ದೆ!
ಮತ್ತೊಂದು ದಿನ ಬೆಂಗಳೂರೆಂಬ ಇದೇ ಮಾಯಾನಗರಿಯ ಬಸ್ ಹತ್ತಿದೆ. ನಾಗೇಗೌಡರ ಮನೆ ಹುಡುಕುತ್ತ ಕುಮಾರಪಾರ್ಕ್ನಲ್ಲಿ ಅವರ ಮನೆ ಮುಂದೆ ಅವರು ಮಹಡಿಯಿಂದ ಇಳಿಯುವುದನ್ನೆ ಕಾಯುತ್ತ ನಿಂತಿದ್ದ ನಾನು ಅವರು, ಕಪ್ಪು ಕಾರು ಬಳಿ ಬರುವುದನ್ನೆ ಕಾಯುತ್ತಿದ್ದು ಕಾಣಿಸಿಕಂಡೆ. 'ಹೂಂ ನೋಟೀಸ್ ಬೋರ್ಡ್ ನೋಡಿದ್ರೊ' ಎಂದು ಕಾರು ಹತ್ತೇ ಬಿಟ್ಟರು! ಏನೂ ಅರ್ಥವಾಗಲಿಲ್ಲ. ಏನೋ ಆಸೆಯಿಂದ, ಆಟೋ ಒಂದರಲ್ಲಿ ಓಡಿ ಹೋಗಿ ನೋಡಿದರೆ ನಾನು ಸರ್ಕಾರಿ ನೌಕರನಾಗಿದ್ದೆ! ಎಂ.ಎ. ವ್ಯಾಸಂಗ ಮಾಡುವಾಗ ನಮ್ಮ ಮಲೆನಾಡಿನ ಯಾರೋ ಪುಣ್ಯಾತ್ಮ ಮಲೆನಾಡ ಕಡೆಯ ಸ್ನಾತಕೋತ್ತರ ವ್ಯಾಂಸಂಗದ ಅಲ್ಲಿನ ಹುಡುಗರಿಗೆ ನೀಡುವ ೩೦೦ ರೂ.ಗಳ ಸ್ಕಾಲರ್ ಶಿಪ್ ಒಂದನ್ನು ನನಗೆ ನೀಡಿದ್ದರು. 'ಹೇ ತನ್ರಿ ಇಲ್ಲಿ' ಅದರಲ್ಲಿ ಒಂದು ಪುಸ್ತಕ ಪ್ರಿಂಟ್ ಮಾಡಿಸಿಬಿಡಿ’ ಎಂದು ಪಿ.ಕೆ. ರಾಜಶೇಖರ ಅವರು ಸೂಚನೆ ನೀಡಿ ಅಚ್ಚು ಹಾಕಿಸಿದ್ದರು. ಆ ಜಾನಪದ ಕಥನ 'ಸತ್ಯ ಭೋಜರಾಜ' ಪುಸ್ತಕವು ನನ್ನ ಬದುಕಿಗೆ ದಿಕ್ಕು ತೋರಿಸಿತ್ತು, ಅದೂ ನಾರಾಯಣರ-ನಾಗೇಗೌಡರೆಂಬ ಜೋಡಿ ಮೂಲಕ.
ನಾಗೇಗೌಡರು ನನ್ನಿಂದ ಜಾನಪದ ನೆಲವನ್ನು ಗೆಯ್ಯಿಸಿಕೊಂಡರು. ನನ್ನನ್ನು ಕೇಳದೆ ಪರಿಷತ್ತಿನ ಟ್ರಸ್ಟಿಯಾಗಿ ಮಾಡಿಕೊಂಡರು. ನಾರಾಯಣರು ಜೊತೆಯಲ್ಲಿ ಕೂರಿಸಿಕೊಂಡರು. ಈ ಸಂದರ್ಭದಲ್ಲಿ ಇವೆಲ್ಲಾ ನೆನಪಾಗುತ್ತವೆ.
(ಮುಂದುವರಿಯುವುದು)
ಪ್ರೀತಿಯ ಕಣ್ಣು
ಶ್ರೀಮತಿ ರೂಪಾ ಹಾಸನ
ಹೂವು ಕಾಯಿ ಚಿಗುರು
ಸಲ್ಲೀಲ ಸಲ್ಲಾಪ ನೋಟಕ್ಕೆ
ಕಾಣುವ ಬಿಡಿಸಿಟ್ಟ ನುಡಿ ಚಿತ್ರ
ಕಾಣದೆಲೆಯ ಬೆನ್ನಿನ ಮೇಲೆ
ಚಿಟ್ಟೆ ಬಿಟ್ಟು ಹೋದ
ಸಾಲು ಸಾಲು
ಅನಾಥ ಮೊಟ್ಟೆಯಲ್ಲಿ...
ಇಳಿದ ಆಳ
ಏರಿದ ಎತ್ತರ
ವಿಸ್ತರಿಸಿದ ಅಗಲ
ಯಾರದೋ ಸಿದ್ಧ
ಲೆಕ್ಕಾಚಾರದ ಬೇಲಿದಾಟಿ
ಕಣ್ಣು ಮಿಟುಕಿಸುವ ಅನಂತದಾಲಿಂಗನದಲ್ಲಿ...
ಮುಗಿದು ಹೋದ
ಮಾತಿನ ಪುರಾಣ ಪುಣ್ಯಕಥೆ
ಕಥಾ ಕಾಲಕ್ಷೇಪ ಹರಿಕಥೆ
ತುದಿ ಹಿಡಿದು ಉತ್ತುಂಗಕ್ಕೇರಿದರೆ
ನಿಶಿತ ಕತ್ತಲು
ಉಸಿರು ಕಟ್ಟಿಸುವ ಮಹಾಮೌನದಲ್ಲಿ...
ಹೊಸ ತಟ್ಟೆಯಲಿ ಮೂಡಿದ ಬಿಂಬ
ಆ ರೂಪದ ಪ್ರತಿಬಿಂಬ
ಅದರ ಕಡುಕೆಂಪು ಕಣ್ಣಿನೊಳಗಿನ
ಆಳದಾಟಕ್ಕೆ ಇಳಿದ ನೋಟ
ಅದರೊಳಗೇ ಅರಳುತ್ತಾ
ಉರಿದುರಿದು ಸುಡುವ
ಬೆಳಕೇ ಬೆಂಕಿಯಾದ ರೆಕ್ಕೆಯಲ್ಲಿ...
ಯಾವ ಕಾಲವಾಯ್ತೋ
ಉದ್ದಕ್ಕೆ ಮಲಗಿದ ರಸ್ತೆ
ಮೇಲೆಲ್ಲ ಬಿಡಿವಿರದ
ಅಬ್ಬರದ ಹರಿದಾಟ
ಒಳಗೇ ಬತ್ತಿ ಹೋಗಿ
ಮೊಳಯಲಾಗದೇ ಉಳಿದ ಬೀಜ
ಉಕ್ಕದೇ ಒಣಗಿದ ಕಿಚ್ಚು
ಒದ್ದೆಯಾಗದೇ ಉಳಿದ ಮಣ್ಣು
ಮಿಡು ಮಿಡುಕಿ ಸುಯ್ಯುವಲ್ಲಿ...
ಅರಳಿದ ಪ್ರೀತಿಯ ಕಣ್ಣಿಂದ
ಸದ್ದಿರದೇ ಮೆಲ್ಲನುದುರುವ
ಹನಿ ಹನಿ ನೀರು...
|
|