ಧರ್ಮದ ಮಾತು

ಡಾ. ಹಿ. ಶಿ. ರಾ.
 
 
 
 
ಅಮೆರಿಕದ ಉತ್ತರ ಭಾಗದಲ್ಲಿ ಆಮಿಶ್ ಎಂಬ ಸಮುದಾಯವೊಂದಿದೆ. ಅವರು ಯಾವುದೇ ಆಮಿಷವಿಲ್ಲದೆ ಬದುಕುತ್ತಿದ್ದಾರೆ. ಅದೂ ಅಮೆರಿಕೆಯಲ್ಲಿ ಅತ್ಯಂತ ಉನ್ನತ ತಂತ್ರಜ್ನಾನ ಮತ್ತು ಅದರಿಂದ ದತ್ತವಾಗಿರುವ ನೂರಾರು ಅವಕಾಶಗಳು, ಅನುಕೂಲಗಳು, ಆಮಿಷಗಳು, ಮೋಜು ಮತ್ತು ಮಸ್ತಿಗಳು ಆಮಿಶ್ ಜನರ ಹತ್ತಿರ ಸುಳಿದಿಲ್ಲ. ಅವರು ಆಧುನಿಕ ವಾಹನ ಸೌಲಭ್ಯಗಳನ್ನು ಬಳಸುವುದಿಲ್ಲ. ಅವರ ಪ್ರದೇಶದ ಮಧ್ಯದಲ್ಲೇ ಹೈವೇ ಹೋಗುತ್ತಿದ್ದರೂ ಅವರು ಸೈಕಲ್ ಮತ್ತು ತಮ್ಮದೇ ರೀತಿಯ ಬಗ್ಗಿ ಗಳೆಂಬ ಕುದುರೆಗಾಡಿಯಲ್ಲಿ ಪ್ರಯಾಣ ಮಾಡುತ್ತಾರೆ. ಸೈಕಲ್ ತುಳಿದುಕೊಂಡು ಹೋಗುತ್ತಾರೆ. ಟೆಲಿಫೋನ್, ಮೊಬೈಲ್ ಬಳಸುವಂತಿಲ್ಲ. ಮಿಲಿಟರಿ ಎಂಬುದೆ ಹಿಂಸೆ ಎನ್ನುವ ಕಾರಣಕ್ಕೆ ಅದರ ದರ್ಪದ ಸಂಕೇತವಾದ ಮೀಸೆಬಿಡುವುದಿಲ್ಲ.
 
 
ಅವರು ಸರಳ ಜೀವಿಗಳು, ಅಹಂಕಾರರಹಿತರು. ಸಹಕಾರ ಮನೋಭಾವವುಳ್ಳವರು, ವಿನಯಶೀಲರು, ಉದ್ರೇಕಗೊಳ್ಳದವರು, ಸ್ವಾರ್ಥಸಾಧನೆಯನ್ನು ಇಷ್ತ ಪಡದವರು, ತಮ್ಮದೇ ಸರಿ ಎಂಬ ಹಟವಿಲ್ಲದವರು. ಇನ್ನೂ ನಾವು ಗಮನಿಸುವುದಿದೆ. ಅದೆಂದರೆ ಸರ್ಕಾರದ ಅನುಕೂಲಗಳಿಗೆ ಕೈಚಾಚದಿರುವುದು, ಸರ್ಕಾರಕ್ಕೆ ತೆರಿಗೆ ಕೊಡದಿರುವುದು. ಇನ್ನೊಬ್ಬರ ಫಲಕ್ಕೆ ಬಯಸಿ ಫಲಾನುಭವಿಗಳಾಗದೆ ಇರುವುದಿದೆಯಲ್ಲ, ಅದನ್ನು ಈ ಕಾಲದಲ್ಲಿ ಊಹಿಸಿಕೊಳ್ಳಬಹುದೆ!
 
 
ಜೀವಕ್ಕೆ ಹೆದರಿ ಇನ್ಶೂರೆನ್ಸ್ ಮಾಡಿಸುವ ಜೀವಗಳ್ಳತನ ಇವರಿಗಿಲ್ಲ. ಸಾಮೂಹಿಕ ಆರೋಗ್ಯ ಧನವನ್ನು ತಮ್ಮತಮ್ಮಲ್ಲೇ ಸಂಗ್ರಹಿಸಿಕೊಂಡು ಕಷ್ಟಕಾಲದಲ್ಲಿ ಅದನ್ನು ಬಲಸಿಕೊಳ್ಳುತ್ತಾರೆ. ಸ್ವಂತ ಕೃಷಿ, ಸ್ವ ಉದ್ಯೋಗ ಮಾಡುವುದು ಅವರಿಗೆ ಹಿತ. ವ್ಯಕ್ತಿಯೆಂದರೆ ಬದುಕು ಮತ್ತು ಅಭಿವೃದ್ಧಿಯನ್ನು ಬಯಸುವುದಲ್ಲ. ಕುಟುಂಬ ಜೀವನದ ಬಗ್ಗೆ ತುಂಬ ಗೌರವ, ಮಕ್ಕಳು ದೇವರ ವರ ಎಂದು ನಂಬಿದವರು. ದೊಡ್ಡ ಕುಟುಂಬಗಳೆಂದರೆ ಇನ್ನೂ ಹೆಮ್ಮೆ. ಆದ್ದರಿಂದಲೇ ಇವರು ಜನನ ನಿಯಂತ್ರಣವನ್ನು ವಿರೋಧಿಸುತ್ತಾರೆ. ಅಂತರ್ ಧರ್ಮೀಯ ಮದುವೆಗಳಿಂದ ದೂರ ಇರುತ್ತಾರೆ. ವಿವಾಹ ವಿಚ್ಚೇದನದ ಮಾತಂತೂ ದೂರವೇ ಉಳಿಯಿತು.
 
 
ಇವರ ಆಮಿಶ್ ಭಾಷೆಯೆ ಇವರಿಗೆ ಶ್ರೇಷ್ಠ. ವ್ಯವಹಾರಕ್ಕೆ ಇಂಗ್ಲಿಷ್ ಕಲಿಯುತ್ತಾರೆ. ತಾವು ಆಮಿಶರು, ಉಳಿದ ಜಗತ್ತಿನ ಜನವೆಲ್ಲಾ ಇಂಗ್ಲಿಷರು ಎಂಬುದು ಇವರ ಲೋಕದೃಷ್ಟಿ. ಎಂಟನೆಯ ತರಗತಿಯವರೆಗೆ ಮಾತ್ರ ಮಕ್ಕಳನ್ನು ಓದಿಸುತ್ತಾರೆ. ಅದು ಏಕ ಕೊಠಡಿಯ ಶಾಲೆಗಳಲ್ಲಿ. ಕಡ್ಡಾಯ ಶಿಕ್ಷಣ ಕಾನೂನನ್ನು ಪಾಲಿಸುವುದಿಲ್ಲ. ತಾವುಂಟು ಮೂರು ಲೋಕವುಂಟು ಎಂಬುದು ಈ ಸಮುದಾಯದ ಐಡೆಂಟಿಟಿ.
 
 
ತಂಬಾಕು ಸೇವನೆ ಇವರಲ್ಲಿ ಹೆಚ್ಚಿಲ್ಲ. ಲೈಂಗಿಕ ರೋಗಗಳು ಕಡಿಮೆ. ಚರ್ಮರೋಗಗಳೂ ವಿರಳ. ಕೃತಕ ಗರ್ಭಧಾರಣೆಯನ್ನು ಒಪ್ಪುವುದಿಲ್ಲ. ಆದರೆ ಬುದ್ದಿಮಾಂದ್ಯ ಮಕ್ಕಳ ಸಂಖ್ಯೆ ಬೇರೆ ಸಮುದಾಯಗಳಿಗೆ ಹೋಲಿಸಿದರೆ ಹೆಚ್ಚು. ಸಮುದಾಯದ ಒಳಗೇ ವಿವಾಹ ಸಂಬಂಧಗಳು ಬೆಳೆಯುವುದು ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.
 
 
ಈ ಹೊತ್ತು ಇದೆಲ್ಲಾ ಒಂದು ಕಟ್ಟುಕತೆಯಂತೆ ಕೇಳಿಸುತ್ತಿದೆ. ಏರುಮುಖವಾಗಿ ಬೆಳೆಯುತ್ತಿರುವ ಜಗತ್ತಿನಲ್ಲಿ ಹೀಗೆ ಒಂದೇ ಕಡೆ ನಿಂತು ಬದುಕು ನಿರ್ವಹಿಸುವುದಾದರೂ ಹೇಗೆ ಎಂದು ಯಾರಿಗೂ ಅನಿಸಬಹುದು. ’ಅಗತ್ಯತೆ ಬದುಕು, ದುರಾಸೆ ಶೋಷಣೆ’ ಎಂಬ ಹಿಂದಿನ ಜಗತ್ತನ್ನು ಎತ್ತಿ ಹಾಕಿ ಈಗ ’ಗ್ರೀಡ್ ಈಸ್ ಗುಡ್’ ಎಂಬ ಜಾಹೀರಾತುಗಳು ಬರುತ್ತಿವೆ. ಆಧುನಿಕ ಅರ್ಥಶಾಸ್ತ್ರಜ್ನರು ಮತ್ತು ವಿಜ್ನಾನಿಗಳನ್ನು ಕೇಳಿದರೆ ಈಗಿರುವ ಸ್ಥಿತಿಗಿಂತ ಹಿಂದಕ್ಕೆ ಹೋಗುವುದೇ ಸಾಧ್ಯವಿಲ್ಲ ಎನ್ನುತ್ತಿದ್ದಾರೆ. ನಿಮಗೆ ಚಂದ್ರಗ್ರಹ ಅಥವಾ ಮಂಗಳ ಗ್ರಹದಲ್ಲಿ ವಸತಿ ಮಾಡುತ್ತೇವೆ, ನೀರು ಬೆಳಕನ್ನು ಹೊಸ ವಸ್ತು ಸಂಯೋಜನೆಯಿಂದ ಮಾಡಿಕೊಡುತ್ತೇವೆ ಎಂದು ವಿಶ್ವಾಮಿತ್ರ ಹಟ ಮಾಡುತ್ತಿದ್ದಾರೆ. ತಕ್ಷಣದ ಜಗತ್ತು ಮಸ್ತ್ ಮಜಾ ಮಾಡು ಎನ್ನುತ್ತಿದೆ. ಇವರೊಳಗೆ ಆಮಿಶ್ ಜನರೂ ಇದ್ದಾರೆಂದರೆ!
 
 
ಭಾರತೀಯರಲ್ಲಿ ಕೆಲವರು ನಮ್ಮ ಗಾಂಧಿ ಬದುಕಿದ್ದಾನೆ ಎಂದು ಸಂತಸ ಪಡಬಹುದು. ’ಸ್ಮಾಲ್ ಇಸ್ ಬ್ಯೂಟಿಫುಲ್’ ಎಂದ ಅರ್ಥ ಚಿಂತಕ ಷೂಮಾಕರ್ ಪಂಥದವರು ನಮಗೆ ಈಗಲೂ ಬದುಕುವ ಪರ್ಯಾಯ ಮಾರ್ಗ ಇದೆ ಎಂದು ಸಮಾಧಾನ ಪಟ್ಟುಕೊಳ್ಳಬಹುದು. ಆದರೆ ಒಂದು ಮಾತು ನಿಜ. ಆಮಿಶ್ ಜನರು ಆ ಬಗೆಯ ಸರಳ ಬದುಕು ನಡೆಸಲು ಮುಖ್ಯ ಕಾರಣ ಅವರ ಧರ್ಮ ಮತ್ತು ಅದರ ಕಟ್ಟುಪಾಡುಗಳು. ಅವರ ಕ್ರಿಸ್ಚಿಯನ್ನರಾದರೂ, ಪಾದ್ರಿಗಳಿದ್ದರೂ, ವಿಕೇಂದ್ರಿಕೃತ ಧರ್ಮ ಸಂಪ್ರದಾಯಕ್ಕೆ ಹೊಂದಿಕೊಂಡವರು.
 
ಇಷ್ಟೆಲ್ಲ ಮಾತುಗಳ ಮಧ್ಯೆ ಆಮಿಶರು ಮತ್ತು ಅವರ ಧರ್ಮವನ್ನು ನಾವು ಕೊಂಡಾಡಬಹುದು. ಭಾರತದಲ್ಲಿ ಬುಡಕಟ್ಟು ಜನರ ಬಗ್ಗೆ ಮಾತನಾಡುವವರು ಅವರನ್ನು ಕಾಡಿನಿಂದ ಹೊರತರಬೇಡಿ ಎಂದು ಹಟಮಾಡಿ ಹೇಳುತ್ತಾರೆ. ಆದರೆ ನಾವು ಬೆಳವಣಿಗೆ ಮತ್ತು ಸ್ತಬ್ಧತೆಯ ಮಧ್ಯದ ಅರ್ಥವನ್ನು ತಿಳಿಯಬೇಕಲ್ಲವೆ? ಮಾನವ ವಿಕಾಸಕ್ಕೆ ಅರ್ಥವೇನು? ಸಮಾನ ಜೀವನದ ಪ್ರಶ್ನೆಯೊಂದು ನಮ್ಮ ಮುಂದೆ ಇಲ್ಲವೆ? ಇದಕ್ಕೆ ಓದುಗರು ಪ್ರತಿಕ್ರಿಯಿಸಬೇಕೆಂದು ಕೋರುವೆ.
 
 
(ಮುಂದುವರಿಯುವುದು)
  
 
 
 
 
 
Copyright © 2011 Neemgrove Media
All Rights Reserved