ಪೆರುವಿನ ತೀರದಲ್ಲಿ ಸಾವಿನ ಜಾತ್ರೆ

 
ಕಳೆದ ಮೂರು ನಾಲ್ಕು ತಿಂಗಳಿಂದ ಪೆರುವಿನ ಸಮುದ್ರತೀರದಲ್ಲಿ ಡಾಲ್ಫಿನ್ಗಳ ಸಾವಿನ ಜಾತ್ರೆ ನಡೆಯುತ್ತಿದೆ. ಇದು ಡಾಲ್ಫಿನ್ಗಳು ಮರಿಹಾಕುವ ಸಮಯವಾದ್ದರಿಂದ ಸತ್ತವುಗಳಲ್ಲಿ ಹೆಣ್ಣು ಡಾಲ್ಫಿನ್ಗಳು ಮತ್ತು ಅವುಗಳ ಪುಟ್ಟ ಮರಿಗಳ ಸಂಖ್ಯೆಯೇ ಹೆಚ್ಚು. ಇದುವರೆಗೂ ಕನಿಷ್ಟ ಮೂರು ಸಾವಿರ ಡಾಲ್ಫಿನ್ ಗಳು ಸತ್ತು ತೀರಕ್ಕೆ ಬಂದಿವೆ. ಹಾಗಾದರೆ ತೀರಕ್ಕೆ ಬರುವ ಮುನ್ನವೇ ಇತರ ಜಲಚರಗಳಿಗೆ ಆಹಾರವಾಗಿರುವ ಡಾಲ್ಫಿನ್ ಗಳ ಸಂಖ್ಯೆ?! ಯಾವ ಪರಿಸರ ವಿಜ್ನಾನಿಯೂ ಊಹಿಸುವ ಧೈರ್ಯ ಮಾಡುತ್ತಿಲ್ಲ. ಸಂಖ್ಯೆಯಿರಲಿ, ಈ ಮುಗ್ಧ ಜೀವಿಗಳ ದುರಂತದ ಸಾವಿಗೆ ನಿಖರವಾದ ಕಾರಣವನ್ನು ಪತ್ತೆ ಮಾಡಲೂ ಇನ್ನೂ ಸಾಧ್ಯವಾಗಿರಲಿಲ್ಲ. ಆದರೆ...
 
 
ಡಾಲ್ಫಿನ್ ಗಳ ಉಳಿವಿಗಾಗಿ ಹೋರಾಡುತ್ತಿರುವ ಪೆರುವಿನ ಓರ್ಕಾ ಸಂಸ್ಥೆ ಏಪ್ರಿಲ್ ೧೩ರಂದು ಡಾಲ್ಫಿನಗಳ ಸಾವಿಗೆ ವೈಜ್ನಾನಿಕ ಸಾಧ್ಯತೆಯೊಂದರ ವರದಿ ಮಾಡಿದೆ. ಸಮುದ್ರ ತಳದಲ್ಲಿ ತೈಲ ನಿಕ್ಷೇಪಗಳನ್ನು ಪತ್ತೆ ಹಚ್ಚಲು ತೈಲ ಕಂಪನಿಗಳು ಸೋನಾರ್ ಬ್ಲಾಸ್ಟ್ ಎಂಬ ಸಮುದ್ರತಳದ ಆಸ್ಫೋಟವೊಂದನ್ನು ಮಾಡುತ್ತವೆ. ಇದರಿಂದ ಆಸ್ಫೋಟ ಮಾಡಿದ ವಲಯದಲ್ಲಿ ತೈಲ ನಿಕ್ಷೇಪಗಳು ಇವೆಯೋ ಇಲ್ಲವೋ ತಿಳಿದುಬರುತ್ತದಂತೆ. ಈ ಆಸ್ಫೋಟದಿಂದ ಭಾರೀ ಶಬ್ಧ ತರಂಗಗಳಲ್ಲದೇ, ವಿಷಯುಕ್ತ ಪದಾರ್ಥ ಮತ್ತು ವಿಶೇಷವಾದ ಗುಳ್ಳೆಗಳು ಹೊರಡುತ್ತವೆಂದು ಹೇಳಲಾಗಿದೆ. ಈ ಸೋನಾರ್ ಬ್ಲಾಸ್ಟ್ ನ ಸದ್ದು ನಮಗೆ ಯಾವತ್ತೂ ತಲುಪದು, ನಮ್ಮ ಕಣ್ಣಿಗೂ ಕಾಣಿಸದು. ಆದರೆ ಸಮುದ್ರದಾಳದಲ್ಲಿ ಆಗುತ್ತಿರುವ ಸೋನಾರ್ ಬ್ಲಾಸ್ಟ್ ಗಳ ಸರಣಿ ಸದ್ದು ಸೂಕ್ಷ್ಮ ಸಂವೇದನಾ ಜೀವಿಗಳಾದ ತಿಮಿಂಗಲ, ಸಮುದ್ರಸಿಂಹ (ಸೀ ಲಯನ್), ಡಾಲ್ಫಿನ್ ಮತ್ತಿತರ ಜೀವಿಗಳನ್ನು ಕಿವುಡು ಮಾಡಿ, ಅವಕ್ಕೆ ಆಸ್ಫೋಟದಿಂದ ದೇಹದ ಒಳಗೆ ರಕ್ತ ಸ್ರಾವವಾಗಿ, ಮತಿಭ್ರಮಣೆಯಾದಂತಾಗಿ ಧಿಡೀರ್ ಸಾವನ್ನಪ್ಪುತ್ತವೆ ಎಂದು ಪೆರುವಿನ ವಿಜ್ನಾನಿಗಳು ತಿಳಿಸಿದ್ದಾರೆ.
 
 
 
ಅಕಾಲಿಕ ಸಾವನ್ನಪ್ಪಿ ದಡಕ್ಕೆ ತೇಲಿಬರುತ್ತಿರುವ ಡಾಲ್ಫಿನ್ ಗಳನ್ನು ಪರೀಕ್ಷಿಸಿದಾಗ ಅವುಗಳ ಕಿವಿಗಳ ತಮಟೆ ಒಡೆದಿರುವುದು, ತಲೆಯ ಒಳಭಾಗದ ರಚನೆಗಳು ಒತ್ತಡದಿಂದ ಘಾಸಿಯಾಗಿರುವುದು, ಅವುಗಳ ರಕ್ತದಲ್ಲಿ ಸೋನಾರ್ ಬ್ಲಾಸ್ಟಿನಿಂದುಂಟಾಗುವ ಗುಳ್ಳೆಗಳಿರುವುದು, ರಕ್ತದಲ್ಲಿ ವಿಷಪದಾರ್ಥಗಳಿರುವುದು ಕಂಡುಬಂದಿದೆ ಎಂದು ಪರಿಸರವಿಜ್ನಾನಿಗಳು ಹೇಳಿದ್ದಾರೆ. 
 
 
ಅಮೆರಿಕಾದ ಗಲ್ಫ್ ಆಫ್ ಮೆಕ್ಸಿಕೋ ತೀರದಲ್ಲಿಯೂ ಮೂರುತಿಂಗಳ ಹಿಂದೆ ಹಲವಾರು ಡಾಲ್ಫಿನ್ ಗಳ ಶವಗಳು ಸಿಕ್ಕಿದ್ದವು. ಆಗ ಸೋನಿಕ್/ ಸೋನಾರ್ ಬ್ಲಾಸ್ಟ್ ಗಳನ್ನು ಮೇ ತಿಂಗಳವರೆಗೂ ಮಾಡದಂತೆ ನಿರ್ಬಂಧಿಸಲಾಗಿತ್ತು. ಡಾಲ್ಫಿನ್ ಗಳು ಮರಿಹಾಕಿ ಮೇ ತಿಂಗಳಿನವರೆಗೂ ಮರಿಗಳನ್ನು ಸಾಕುವ ಸಮಯವೆಂದು ಅಂದಾಜು ಮಾಡಲಾಗಿದೆ. ಡಾಲ್ಫಿನ್ಗಳು ಮರಿ ಹಾಕಿದ ನಂತರ ಅವು ಸುಮಾರು ತಿಂಗಳು ಆಳವಲ್ಲದ ನೀರಿನಲ್ಲಿ ವಾಸಿಸಿಕೊಂಡು ಮರಿಗಳನ್ನು ಸಾಕುತ್ತವೆ. ಮರಿಗಳು ತಕ್ಕಮಟ್ಟಿಗೆ ಬೆಳೆದ ನಂತರ ಗುಂಪುಗುಂಪಾಗಿ ಬೇಕಾದಲ್ಲಿಗೆ ಓಡಾಡಿಕೊಳ್ಳುತ್ತವೆ.
 
 
ಪೆರುವಿನಲ್ಲಿ ಕಂಡುಬಂದಿರುವ ಡಾಲ್ಫಿನ್ ಗಳ ಸಾವಿನಿಂದಾಗಿರುವ ಜೈವಿಕ ನಷ್ಟ ಭರಿಸಲಾರದ್ದು. ಸಮುದ್ರದಾಳದಲ್ಲಿ ಬೇರೆ ಜೀವಿಗಳ ಪರಿಸ್ಥಿತಿ ಏನಾಗಿದೆ ಎಂಬುದನ್ನು ಸಮಯವೇ ಹೇಳಬೇಕು. ಇನ್ನು ಮೇ ತಿಂಗಳ ನಂತರ ಗಲ್ಫ್ ಆಫ್ ಮೆಕ್ಸಿಕೋನಲ್ಲಿ ಮತ್ತೆ ಸಮುದ್ರದಾಳದಲ್ಲಿ ತೈಲಕಂಪನಿಗಳು ಸೋನಾರ್ ಬ್ಲಾಸ್ಟ್ ಶುರುಮಾಡುತ್ತವೆ. ಆಗ?! ಧನದಾಹೀ ತೈಲ ಕಂಪನಿಗಳಿಗೆ, ಅವುಗಳು ಬಿಸಾಡುವ ಕಸ ತಿನ್ನುತ್ತಾ ವಿನಾಶಕಾರೀ ಕಾರ್ಯಗಳಿಗೆ ಅನುವು ಮಾಡಿಕೊಡುವ ರಾಜಕಾರಣಿಗಳೆಂಬ ಜಾಗತಿಕ ಧನಪಿಶಾಚಿಗಳ ಸರ್ವನಾಶಕ್ಕೆ ಏನಾದರೂ ಒಂದು ಮಾರ್ಗ ಬೇಕಲ್ಲಾ...
 
 
ನಾಗರೀಕರು, ಸಂಸ್ಕೃತಿಯುಳ್ಳವರು, ಆಧುನಿಕರು, ಬುದ್ಧಿವಂತರೆಂದು ಆತ್ಮರತಿಯಲ್ಲೇ ತೊಡಗಿಕೊಂಡು...ಹುಟ್ಟಿದಾಗಿನಿಂದಲೂ ಭೂಮಿಯನ್ನೂ, ಸಹವಾಸಿಗಳನ್ನೂ, ಸಹಜೀವಿಗಳನ್ನೂ ಅಡಿಯಾಳನ್ನಾಗಿ ಮಾಡಿಕೊಂಡು, ತಮ್ಮ ಭೋಗದ ವಸ್ತುವನ್ನಾಗಿ ಮಾಡಿಕೊಂಡಿರುವ ನಮ್ಮ ಅನಾಹುತಕಾರೀ ಅಸ್ತಿತ್ವಕ್ಕೆ ಒಂದು ಧಿಕ್ಕಾರವಿರಲಿ.

 

 

ಗ್ಲೋಬಲ್ ವಾರ್ಮಿಂಗ್: ಕಣ್ಣಿಗೆ ಕಾಣದ ವೈಪರೀತ್ಯಗಳು

 
 
ಪೆಂಗ್ವಿನ್ ಗಳ ದಾರುಣ ಕಥೆ ಹಾಗಾಗಿದೆ. ಅದು ಮನುಷ್ಯನೆಂಬ ಪ್ರಾಣಿಯನ್ನು ಆಡಿಸಿ ಕೆಡವುತ್ತಿರುವ ದುರಾಸೆಯೆಂಬ ಕ್ರೂರ ಪೀಡೆಯ ಅಟ್ಟಹಾಸ. ಅದೇ ಅಟ್ಟಹಾಸದ ದಶಕಗಳ ಮಾರ್ದನಿ ಭೂಮಿಯ ಮೇಲಿನ ಇತರ ಜೀವ ಸಂಕುಲಗಳ, ಜೀವಸೆಲೆಗಳ ಹುಟ್ಟಡಗಿಸಲು ದಶದಿಕ್ಕುಗಳಲ್ಲೂ ಕಾರ್ಯಪ್ರವೃತ್ತವಾಗಿದೆ.  
 
 
ಆರ್ಕ್ಟಿಕ್ ಸಮುದ್ರದ ಗ್ಲೇಶಿಯರ್ ಗಳು ತೀವ್ರಗತಿಯಲ್ಲಿ ಕರಗುತ್ತಿರುವುದರ ಬಗ್ಗೆ ಈ ಹಿಂದೆ ಬರೆದಿದ್ದೆವು. ಶೀತ ಪ್ರದೇಶದಲ್ಲಿ ವಾಸವಾಗಿರುವ ಪ್ರಾಣಿಪಕ್ಷಿಗಳ ಜೈವಿಕ ಗಡಿಯಾರ ಕನ್ಫ್ಯೂಸ್ ಆಗಿ, ಸ್ವಾಭಾವಿಕವಾಗಿ ಹೈಬರ್ನೇಟ್ ಮಾಡುವ ಸಮಯದಲ್ಲಿ ಹೆರಲು ತೊಡಗಿವೆ, ಆಡುವ ಸಮಯದಲ್ಲಿ ಅಡಗಲು ತೊಡಗಿವೆ. ಹಾಗೇ ಆಲ್ಪೈನ್ ಗ್ಲೇಶಿಯರ್ ಗಳು ಸಾಕಪ್ಪಾ ಸಾಕೆಂದು ಕರಗುತ್ತಿವೆ, ಎರಡೂ ಧೃವಗಳಲ್ಲಿ ದಟ್ಟವಾಗಿರುತ್ತಿದ್ದ ಚಳಿಗಾಲಗಳು ಕಡಿಮೆಯಾಗುತ್ತಿವೆ. ಕರಗುತ್ತಿರುವ ಮಂಜಿನ ಮಟ್ಟ ಹೆಚ್ಚಾಗಿ ಎಲ್ಲೆಲ್ಲಿ ಸರೋವರಗಳು ನದಿಗಳು ತುಂಬಿವೆಯೋ ಅವು ಮತ್ತಷ್ಟು ತುಂಬಿ ಪ್ರವಾಹಕ್ಕೆಡೆ ಮಾಡಿಕೊಡುತ್ತಿವೆ. 

 
Picture Source: 2007;http://nsidc.org/data/atlas
 
ಈ ಚಿತ್ರಗಳನ್ನು ಗಮನಿಸಿ. ಮೊದಲ ಚಿತ್ರ:  ಜನವರಿ ತಿಂಗಳಲ್ಲಿ, ಉತ್ತರ ಗೋಳದಲ್ಲಿ (ನಾರ್ದರ್ನ್ ಹೆಮಿಸ್ಫಿಯರ್) ಕಂಡುಬಂದಿದ್ದ ಸಮುದ್ರದಲ್ಲಿನ ನೀರ್ಗಲ್ಲು/ಮಂಜುಗಡ್ಡೆಗಳ ಮತ್ತು ಒಟ್ಟಾರೆ ಹಿಮದ ಪ್ರಮಾಣ. ಇದನ್ನು ೧೯೭೯ ಮತ್ತು ೨೦೦೫ ರ ಮಧ್ಯದಲ್ಲಿ ಅಳತೆ ಮಾಡಿದ್ದು (ಇಲ್ಲಿ ನಾರ್ತ್ ಪೋಲ್ ಅನ್ನು ಕೆಂಪುಚುಕ್ಕೆಯಿಂದ ಗುರುತಿಸಲಾಗಿದೆ). ಎರಡನೇ ಚಿತ್ರ: ಸೆಪ್ಟೆಂಬರ್ ತಿಂಗಳಲ್ಲಿ, ದಕ್ಷಿಣ ಗೋಳದಲ್ಲಿ (ಸೌತ್ ಹೆಮಿಸ್ಫಿಯರ್) ಕಂಡುಬಂದಿದ್ದ ಸಮುದ್ರದಲ್ಲಿನ ನೀರ್ಗಲ್ಲು/ಮಂಜುಗಡ್ಡೆ ಮತ್ತು ಒಟ್ಟಾರೆ ಹಿಮದ ಪ್ರಮಾಣ. ಇದನ್ನು ೧೯೮೭ ಮತ್ತು ೨೦೦೨ರ ನಡುವೆ ಅಳತೆ ಮಾಡಲಾಗಿದೆ. ಈ ಚಿತ್ರಗಳು ಐದಾರು ವರ್ಷಗಳ ಹಿಂದಿನವು. ಇಲ್ಲಿ ಕಾಣುವ ಕಡಿಮೆಯಾಗುತ್ತಿರುವ ನಿರ್ಗಲ್ಲು, ಹಿಮದ ಪ್ರಮಾಣವನ್ನು ಗಮನಿಸಿ. ಈ ವೈಪರೀತ್ಯವನ್ನು, ಅಸಮತೋಲನದ ಬದಲಾವಣೆಯನ್ನು ಕಣ್ಣಿನಿಂದ ಗುರುತಿಸಬಹುದು. ಆದರೆ ಕಣ್ಣಿನಿಂದ ತಕ್ಷಣ ಗುರುತಿಸಲಾಗದ ಸಾಕಷ್ಟು ವೈಪರೀತ್ಯಗಳು ಇವು;
 
 
ಧೃವ ಪ್ರದೇಶಗಳಲ್ಲಿ ನಿರ್ಗಲ್ಲು ಮತ್ತು ಹಿಮದ ಪ್ರಮಾಣ ಕಡಿಮೆಯಾದಾಗ ಡೈಯಟೋಮ್ ಗಳೆಂಬ ಆಹಾರ ಉತ್ಪಾದಕ ಸಮೂಹಗಳ ಇಳಿಕೆ ಆಗುತ್ತದೆ. ಡೈಯಟೋಮ್ ಗಳು ಸಮುದ್ರಜೀವಿಗಳ ಆಹಾರ ಸರಪಳಿಯನ್ನು ಸೃಷ್ಟಿಮಾಡುವ ವ್ಯವಸ್ಥೆ. ಡೈಯಾಟೋಮ್ ಗಳು ಕಡಿಮೆಯಾದರೆ ಸಮುದ್ರದ ಆಹಾರ ಸರಪಣಿಯಲ್ಲಿ  ಅತ್ಯಂತ ಕೆಳಹಂತದಲ್ಲಿರುವ ಸೀಗಡಿಗಳು ಬೆಳೆಯುವುದು ಕಡಿಮೆಯಾಗುತ್ತದೆ. ಸೀಗಡಿಗಳು ಕಡಿಮೆಯಾದರೆ ಅವುಗಳನ್ನೇ ಆಹಾರವನ್ನಾಗಿ ನಂಬಿಕೊಂಡಿರುವ ಸಣ್ಣ ಮೀನುಗಳು, ಸಮುದ್ರ ಪಕ್ಷಿಗಳು ಮತ್ತಿತರ ಸಮುದ್ರ ಸಸ್ತನಿಗಳ ಸಂಖ್ಯೆ ಕಡಿಮೆಯಾಗುತ್ತದೆ. ಅರ್ಥಾತ್, ಸಮುದ್ರಜೀವಿಗಳ ಆಹಾರ ಸರಳಿಯಲ್ಲಿ ವೈಪರೀತ್ಯಗಳಾಗುತ್ತವೆ. ಪರಿಣಾಮ: ಹಲವಾರು ಬಗೆಯ ಸಮುದ್ರ ಜೀವಿಗಳು ಆಹಾರವಿಲ್ಲದೇ ಸದ್ದಿಲ್ಲದೇ ನಶಿಸಿಬಿಡಬಹುದು.
 
 
ಕರಗುತ್ತಿರುವ ಗ್ಲೇಶಿಯರ್ಗಳು ಕಶ್ಮಲಗಳನ್ನು ಮತ್ತು ಅಗಾಧ ಪ್ರಮಾಣದ (ಅಸಮತೋಲನವಾಗುವಷ್ಟು) ಲವಣಗಳನ್ನು, ಪೋಷಕಾಂಶಗಳನ್ನು ಸಮುದ್ರ, ಸರೋವರ, ಮತ್ತವುಗಳ ಮೂಲಕ ನದಿ, ಕೆರೆಗಳಿಗೆ ಬಿಡುಗಡೆ ಮಾಡಿಬಿಡುತ್ತವೆ. ಈಗ ಸಮುದ್ರ, ನದಿ, ಕೆರೆಗಳಲ್ಲಿರುವ ಜೀವಿಗಳಿಗೆ ಈ ಭಾರೀ ಪ್ರಮಾಣದ ಕಶ್ಮಲ, ಲವಣಗಳನ್ನು ಅರಗಿಸಿಕೊಂಡು ಅಥವಾ ತಮ್ಮ ಆಹಾರದಲ್ಲಿ ಅಳವಡಿಸಿಕೊಂಡು ಗೊತ್ತಿಲ್ಲ. ಪರಿಣಾಮ: ಸಮುದ್ರದ ಜೀವಿಗಳಿಗೆ ಹೊಸ ರೋಗಗಳು, ವಿಕಲತೆಗಳು ಬರುವ ಸಾಧ್ಯತೆ. ಹಾಗೇ, ಸಮುದ್ರದ ಜೀವಿಗಳನ್ನು ಸೇವಿಸುವವರಿಗೆ ಆ ರೋಗಗಳ ವರ್ಗಾವಣೆ.
 
 
ಸ್ವಾಭಾವಿಕವಾಗಿ ಸಮುದ್ರಗಳು ವಾತಾವರಣದಲ್ಲಿರುವ ಇಂಗಾಲದ ಡೈಆಕ್ಸೈಡ್ ಅನ್ನು ತಕ್ಕ ಮಟ್ಟಿಗೆ ತಮ್ಮೊಳಗೆ ಕರಗಿಸಿಕೊಳ್ಳುತ್ತವೆ. ಆದರೆ ಇತ್ತಿಚಿನ ವೈಜ್ನಾನಿಕ ಪರೀಕ್ಷೆಗಳ ಪ್ರಕಾರ ನೀರ್ಗಲ್ಲುಗಳ ಅತಿಯಾದ ಕರಗುವಿಕೆಯಿಂದಾಗಿ, ಅನೇಕ ಲವಣಗಳ ಸೇರ್ಪಡೆಯಿಂದ, ಸಮುದ್ರಗಳು ಇಂಗಾಲದ ಡೈ ಆಕ್ಸೈಡ್ ಅನ್ನು ತಮ್ಮೊಳಗೆ ಕರಗಿಸಿಕೊಳ್ಳುವ ಶಕ್ತಿಯನ್ನು ಕಡಿಮೆಮಾಡಿಕೊಂಡಿವೆ. ವಿಜ್ನಾನಿಗಳಿಗೆ ಪ್ರಕೃತಿಯ ಈ ರಹಸ್ಯವನ್ನು ಅರ್ಥಮಾಡಿಕೊಳ್ಳುವುದು ಈಗ ಸವಾಲಾಗಿ ಪರಿಣಮಿಸಿದೆ. ಪರಿಣಾಮ: ವಾತಾವರಣದಲ್ಲಿ ವಿಪರೀತ ಪ್ರಮಾಣದ ಇಂಗಾಲದ ಡೈ ಆಕ್ಸೈಡ್. ಅದನ್ನು ಆಮ್ಲಜನಕವನ್ನಾಗಿ ಪರಿವರ್ತಿಸಲು ಸಾಕಷ್ಟು ಗಿಡಮರಗಳು ಉಳಿಯುತ್ತಿಲ್ಲವಾದ್ದರಿಂದ, ಆಮ್ಲಜನಕದ ಕೊರತೆ. 
 
 

ಹಿಮಾಲಯ ಮತ್ತು ಮಾನ್ಸೂನ್


 
ಹಿಂದುಕುಶ್, ಹಿಮಾಲಯ ಪರ್ವತ ಶ್ರೇಣಿಯನ್ನು ಆವರಿಸಿರುವ ಸ್ವಾಟ್, ಚಿತ್ರಾಲ್, ಗಿಲ್ಗಿಟ್, ಶಿಗಾರ್, ಶಿಂಗೋ, ಅಸ್ಟೋರ್, ಹುನ್ಜ಼ಾ, ಝೀಲಂ ಕಣಿವೆ ಪ್ರದೇಶಗಳಲ್ಲಿ ಒಟ್ಟು ೫, ೨೧೮ ಗ್ಲೇಶಿಯರ್ ಗಳೂ ಮತ್ತು ೨, ೪೨೦ ಗ್ಲೇಶಿಯರ್ ಸರೋವರಗಳೂ ಇವೆ. ಈ ಪ್ರದೇಶ ಇಡೀ ವಿಶ್ವದಲ್ಲೇ ಅತ್ಯಂತ ಹೆಚ್ಚು ಗ್ಲೇಶಿಯರ್ ಗಳಿರುವ ಪ್ರದೇಶವೆಂದು ಗುರುತಿಸಲ್ಪಟ್ಟಿದೆ. ಕಳೆದೆರಡು ದಶಕದಿಂದ ಹಿಮಾಲಯದಲ್ಲಿನ ಹೆಚ್ಚಿನ ಗ್ಲೇಶಿಯರ್ಗಳು ಹಿಂದೆಂದೂ ಕಾಣದ ಪ್ರಮಾಣದಲ್ಲಿ ಕರಗುತ್ತಿವೆ, ಕಣ್ಮರೆಯಾಗುತ್ತಿವೆ. ಯೂರೋಪಿಯನ್ ಯೂನಿಯನ್ ಮತ್ತು ಯುನೈಟೆಡ್ ನೇಷನ್ಸ್ ಡೆವೆಲಪ್ಮೆಂಟ್ ಪ್ರೋಗ್ರಾಂ (ಯು.ಎನ್.ಡಿ.ಪಿ) ಇತ್ತೀಚೆಗೆ ಕೈಗೊಂಡ ಯೋಜನೆಯೊಂದು ಈ ಪ್ರದೇಶದ ೫೨ ಸರೋವರಗಳು ಈಗ ಅಪಾಯಕಾರೀ ಮಟ್ಟ ಮುಟ್ಟಿವೆ ಎಂಬ ತೀರ್ಮಾನಕ್ಕೆ ಬಂದಿದೆ.
 
 
ಇದರ ಪರಿಣಾಮವಾಗಿ ಹಿಮಾಲಯದ ಪ್ರದೇಶಗಳಲ್ಲಿ ಪ್ರವಾಹ, ಭೂಕುಸಿತ, ಹಿಮಪಾತಗಳು ಹೆಚ್ಚುತ್ತಿವೆ, ಮುಂದೆಯೂ ಹೆಚ್ಚಲಿವೆ, ಮತ್ತು ಪಾಕೀಸ್ಥಾನದಲ್ಲಿ ಬೀಳುವ ಮಾನ್ಸೂನ್ ಪ್ರಮಾಣವೂ ತೀವ್ರವಾಗಲಿದೆ ಎಂದು ವರದಿ ತಿಳಿಸುತ್ತದೆ. ಹಿಂದುಕುಶ್ ಹಿಮಾಲಯ ಪರ್ವತ ಶ್ರೇಣಿ ಈ ಕಾರಣಗಳಿಂದಾಗಿಯೇ ಹಲವಾರು ಭೂಕಂಪ, ಪ್ರವಾಹ, ಬರ, ಕಾಳ್ಗಿಚ್ಚು, ಹಿಮಪಾತದಂತಹ ವೈಪರೀತ್ಯಗಳಿಗೆ ನೆಲೆಯಾಗಲಿದೆ ಎಂದೂ ವರದಿಯಲ್ಲಿ ಅಭಿಪ್ರಾಯಪಡಲಾಗಿದೆ. ಇದಲ್ಲದೆ ಈ ಬದಲಾವಣೆಗಳ ಕಾರಣದಿಂದ ಪಾಕಿಸ್ಥಾನ, ಅಫ್ಘಾನಿಸ್ಥಾನ, ನೇಪಾಲ, ಬಾಂಗ್ಲಾದೇಶ, ಭಾರತದಲ್ಲಿನ ಮಾನ್ಸೂನ್ ಚಕ್ರಕೂಡಾ ಏರುಪೇರಾಗಿ ಮಳೆ ನಿರೀಕ್ಷಿಸುವ ಪ್ರದೇಶಗಳು ಅತಿವೄಷ್ಟಿ ಅಥವಾ ಅನಾವೃಷ್ಟಿಯಿಂದಲೂ, ಭಾರೀ ಮಳೆಯನ್ನು ನಿರೀಕ್ಷಿಸದ ಪ್ರದೇಶಗಳೂ ಅನಾವೃಷ್ಟಿಯಿಂದಲೂ ಪೀಡಿತವಾಗುವ ಸಾಧ್ಯತೆಗೆ ವರದಿ ಒತ್ತುಕೊಡುತ್ತದೆ.
 
 
 
ಮನೆಯಲ್ಲಿ ಕೂತು, ಬಾಜಾರಿನಿಂದ ಆಹಾರ ಪದಾರ್ಥ ತಂದು ಬೆಚ್ಚಗಿನ ಜೀವನ ನಡೆಸುವವರಿಗೆ ಈ ವೈಪರೀತ್ಯಗಳಿಂದ ಜೇಬು, ಮೈಕೈ ಬಿಸಿಯಾಗಬಹುದು ಅಥವಾ ತೋಯ್ದು ತೊಪ್ಪೆಯಾಗಬಹುದು. ಆದರೆ ಹೊಲಗದ್ದೆಗಳಲ್ಲಿ ಹಗಲು ರಾತ್ರಿ ಕೆಲಸ ಮಾಡಿ, ಬೆಳೆಯೆಂಬ ಚಿನ್ನ ತೆಗೆಯುವ ಅಳಿದುಳಿದ ರೈತಾಪಿಗಳ ಕಾಲ್ಕೆಳಗಿನ ಭೂಮಿ ಕುಸಿದರೆ... 
 
 
 
 
 
 
 
Copyright © 2011 Neemgrove Media
All Rights Reserved