ಗಾಳಿ ಅಂಗಿ ಚುಂಗು ಹಿಡಿದು
ಕಾಲಿಗಷ್ಟು ಚಕ್ರ ಕಟ್ಟಿ
ಮೆಲ್ಲ ಮೆಲ್ಲ ಸಿಲ್ಲಿ ಗಲ್ಲಿ
ಕೋಟೆ ಕೊತ್ತಲ ಊರು ಸುತ್ತಿ
ಕಣ್ಣು ಕಂಡ ಪಟಗಳನ್ನು
ಮನದ ಪದಕೆ ತಳಿಕೆ ಹಾಕಿ
ಹಿಗ್ಗು ಸುಗ್ಗಿ ಎಲ್ಲ ಸುರಿದು
ಪುಟದ ಮೇಲೆ ತಟಪಟಾ...

 

ಸ್ವಿಟ್ಜ಼ರ್ಲ್ಯಾಂಡಿನ ಯೂರೋಟಾಪ್, ಬಾಲಿವುಡ್ ಮತ್ತು ಮಂಜುಗಡ್ಡೆಯ ಅರಮನೆ

 
ಟೋನಿ
 
ಇಂದು ನಮ್ಮ ಪ್ರವಾಸದಲ್ಲಿ ವಿರಾಮದ ದಿನವೆಂದು ನಿನ್ನೆಯೇ ಹೇಳಿದ್ದ ಜ್ಯೂಜ಼ರ್ ಯೂರೋಪ್ ನ ಅತ್ಯಂತ ಎತ್ತರದ ಸ್ಥಳಕ್ಕೆ ಕರೆದುಕೊಂಡು ಹೋಗಿ ಅಲ್ಲಿಂದ ಹಿಂದಿರುಗುವಾಗ ಇಂಟರ್ ಲಕೆನ್ ನಗರವನ್ನು ತೋರಿಸಿಕೊಂಡು ಬರುವುದಾಗಿಯೂ ಅದಕ್ಕೆ ಪ್ರತ್ಯೇಕವಾಗಿ ೧೨೦ ಯೂರೋಗಳನ್ನು ನೀಡಬೇಕಾಗುತ್ತದೆಂದಿದ್ದ. ಇದರಲ್ಲಿ ಬಲವಂತವಿಲ್ಲವೆಂದೂ ಇಷ್ಟವಿರುವವರು ಬರಬಹುದೆಂದೂ ಅದಕ್ಕಾಗಿ ಈಗಲೇ ಹಣ ಕೊಡಬೇಕೆಂದು ಹೇಳಿ ವಸೂಲಿ ಮಾಡಿಕೊಂಡಿದ್ದ. ಪ್ಯಾರಿಸ್ಸಿನಲ್ಲಿಯೂ ನಮಗೆ ಒಂದು ದಿನ ಇದೇ ತರಹದ ಬಿಡುವು ಇತ್ತು. ಅಲ್ಲಿಯೂ ನಾವು ಜ್ಯೂಜ಼ರನು ಕರೆದುಕೊಂಡು ಹೋಗಿದ್ದ ಡಿಸ್ನಿಲ್ಯಾಂಡಿಗೆ ಹಣಕೊಟ್ಟು ಹೋಗಿದ್ದೆವು. ಅಲ್ಲಿಗೆ ಹೋಗಿ ಬಂದ ನಂತರ ಅದಕ್ಕಿಂತ ನಾನು ದಿನವಿಡೀ ಪ್ಯಾರಿಸ್ ನಗರದಲ್ಲಿ ಅಲೆದಾಡಿ ಅಲ್ಲಿನ ಮ್ಯೂಸಿಯಂ ನೋಡಬಹುದೆನಿಸಿತ್ತು. ಆದರೆ ಇಲ್ಲಿ ಸ್ವಿಟ್ಜ಼ರ್ಲೆಂಡಿನಲ್ಲಿ ಬೆಟ್ಟಗುಡ್ಡ ಪ್ರದೇಶಗಳೇ ಇದ್ದುದರಿಂದ ಅಲೆದಾಡಿ ನೋಡುವುದು ಸಾಧ್ಯವಿಲ್ಲದ್ದರಿಂದ ಜ್ಯೂಜ಼ರನು ಹೇಳಿದ್ದಕ್ಕೆ ಎಲ್ಲರೂ ತಲೆಯಾಡಿಸಿ ಹಣ ಕೊಟ್ಟಿದ್ದೆವು.
 
 
ನಮಗೂ ಅವಕಾಶ ಸಿಗಲಿ ಎನ್ನುವಂತೆ ಬಸ್ಸಿನಲ್ಲಿ ಹಿಂದೆ ಕುಳಿತಿದ್ದ ನಮ್ಮನ್ನೆಲ್ಲಾ ಮುಂದೆ ಕೂರಿಸಿ ಮುಂದಿದ್ದವರನ್ನೆಲ್ಲಾ ಹಿಂದೆ ಕೂರಿಸಿದ್ದ ಜ್ಯೂಜ಼ರ್. ನಮ್ಮ ಚಾಲಕ ಕಂ ಗೈಡ್ ’ಆರ್’ ಜತೆಗೆ ಮಾತನಾಡುವ ಅವಕಾಶ ನನಗೆ ಸಿಕ್ಕಿದ್ದರಿಂದ ಅವನನ್ನು ಜಂಗ್ಫ಼್ರಾಜುಕ್(ಯೂರೋ ಟಾಪ್)ಗೆ ಹೋಗುವ ಮಾರ್ಗ ಮಧ್ಯದಲ್ಲಿ ಸಿಗುತ್ತಿದ್ದ ಸ್ಥಳಗಳ ಬಗ್ಗೆ ಕೇಳಿ ತಿಳಿದುಕೊಳ್ಳುತ್ತಿದ್ದೆ. ಆತ ಸ್ವಿಟ್ಜ಼ರ್ಲ್ಯಾಂಡಿನ ಬಗ್ಗೆ ಖುಷಿಯಿಂದಲೇ ಹೇಳುತ್ತಿದ್ದ. ನಾವು ಹೋಗುತ್ತಿದ್ದುದು ಯೂರೋಪಿನ ಅತ್ಯಂತ ಎತ್ತರದ ಪ್ರದೇಶಕ್ಕೆ. ನಮ್ಮ ಮಲೆನಾಡಿನಂತೆಯೇ ಅತ್ಯಂತ ತಿರುವುಗಳಿಂದ ಕೂಡಿದ್ದ ರಸ್ತೆಯದು. ಬಸ್ಸಿನ ಮುಂಭಾಗದಲ್ಲಿ ಕೂತಿದ್ದರಿಂದ ಆ ತಿರುವುಗಳಲ್ಲಿಯೂ ’ಆರ್’ ೭೦ ಕಿಲೋಮೀಟರು ಸ್ಪೀಡಿನಲ್ಲಿ ಓಡಿಸುತ್ತಿದ್ದರಿಂದ ಒಂಥರಾ ಥ್ರಿಲ್ ಆಗಿತ್ತು. ಗುರುಬಸವಯ್ಯನವರು ತಮ್ಮ ಮ್ಯಾಜಿಕ್ ಕ್ಯಾಮರಾ ಹಿಡಿದುಕೊಂಡು ಆ ತಿರುವು ಮುರುವುಗಳಲ್ಲಿ ಬಸ್ ಚಲಿಸುತ್ತಿರುವಾಗಲೇ ಪರ್ವತಗಳತ್ತ ಫ಼ೋಕಸ್ ಮಾಡುತ್ತಿದ್ದರು. ಅವರು ಹಾಗೆ ಫ಼ೋಕಸ್ ಮಾಡಿ ತಮ್ಮ ಕ್ಯಾಮರಾದ ಮೇಲಿನ ಬಟನ್ ಒತ್ತಿ ಕ್ಲಿಕ್ ಮಾಡುವಷ್ಟರಲ್ಲಿ ಬಸ್ ಮತ್ತೊಂದು ತಿರುವಿನಲ್ಲಿ ತಿರುಗುತ್ತಿತ್ತು. ’ಆರ್’ ಆ ತಿರುವುನಲ್ಲಿಯೂ ಫೋಟೋ ತೆಗೆಯಲು ಪರದಾಡುತ್ತಿದ್ದ ಅವರನ್ನು ಮಿರರ್ ನಲ್ಲಿ ನೋಡಿ ಅಚ್ಚರಿಗೊಂಡವನೇ ಸೀಟಿನಲ್ಲಿ ಕೂತು ಬೆಲ್ಟ್ ಹಾಕಿಕೊಳ್ಳುವಂತೆ ಮೈಕಿನಲ್ಲಿ ಎಲ್ಲರಿಗೂ ತಿಳಿಸಿದ. ಅವನ ಮಾತನ್ನು ಯಾರೂ ಗಂಭೀರವಾಗಿ ಪರಿಗಣಿಸದೇ ಪ್ರಕೃತಿ ಸೌಂದರ್ಯವನ್ನು ಸವಿಯುತ್ತಾ ವಾಹ್ ವಾಹ್ ಎಂದು ಉದ್ಗರಿಸತೊಡಗಿದ್ದರು.
 
 
ಬಸ್ ಪರ್ವತವನ್ನು ಹತ್ತುತ್ತಿದ್ದಾಗ ಒಂದು ತಿರುವಿನಲ್ಲಿ ಚೈನೀಯನಂತಿದ್ದವನೊಬ್ಬ ಬಸ್ಸಿನತ್ತ ಕೈ ತೋರಿ ನಿಲ್ಲಿಸುವಂತೆ ಎರಡೂ ಕೈಗಳನ್ನು ಎತ್ತಿ ವಿನಂತಿಸಿಕೊಂಡ. ಪಕ್ಕದಲ್ಲಿ ಮತ್ತೊಂದು ಬಸ್ ನಿಂತಿತ್ತು. ಆ ಬಸ್ಸಿನ ಹಿಂದೆ ನಿಲ್ಲಿಸಿದ ’ಆರ್’ ಆತನ ಸಮಸ್ಯೆಯನ್ನು ಕೇಳಿದ. ಆ ವ್ಯಕ್ತಿ ತಮ್ಮ ಬಸ್ ಕೆಟ್ಟು ಹೋಗಿರುವುದಾಗಿಯೂ ನಾವೂ ಯೂರೋ ಟಾಪ್ ಗೆ ಹೋಗುತ್ತಿರುವುದಾಗಿಯೂ ನಮ್ಮನ್ನೂ ಕರೆದುಕೊಂಡು ಹೋಗಬೇಕೆಂದು ವಿನಂತಿಸಿಕೊಂಡ. ಆತನನ್ನು ಯಾವ ದೇಶದವರೆಂದು ಆರ್ ಕೇಳಿದ್ದಕ್ಕೆ ಕೊರಿಯಾದವರೆಂದು ಹೇಳಿದ. ಆ ಬಸ್ಸಿನಲ್ಲಿದ್ದ ಚಾಲಕ ’ಆರ್’ ನ ಹತ್ತಿರ ಬಂದು ಅದ್ಯಾವುದೋ ಭಾಷೆಯಲ್ಲಿ ಮಾತನಾಡತೊಡಗಿದ. ಅವನ ಜತೆ ಮಾತಾಡಿದ ಆರ್ ನಮ್ಮ ಬಸ್ಸಿನಲ್ಲಿ ಸ್ಥಳವಿರುದಾಗಿಯೂ ೧೫೦೦ ಯೂರೋ ಕೊಟ್ಟರೆ ಯೂರೋಟಾಪ್ ಗೆ ಕರೆದುಕೊಂಡು ಹೋಗುವುದಾಗಿಯೂ ಹೇಳಿದ. ಇವನು ೧೫೦೦ ಯೂರೋ ಹೇಳಿದ್ದನ್ನು ಆ ಬಸ್ಸಿನ ಚಾಲಕ ಕೊರಿಯಾದವನಿಗೆ ಇಂಗ್ಲಿಷಿನಲ್ಲಿ ಹೇಳಿದ್ದಕ್ಕೆ ಆತ ಅಡ್ಡಡ್ಡ ತಲೆಯಾಡಿಸಿ ಆಗುವುದಿಲ್ಲವೆಂದು ಹೇಳಿ ಚೌಕಾಸಿಯನ್ನೂ ಮಾಡದೇ ಹಿಂದಿರುಗಿದ್ದ. ’ನೀನು ೧೫೦೦ ಯೂರೋ ಕೇಳಿದ್ದು ಜಾಸ್ತಿಯಾಯಿತಲ್ಲವೇ’ ಎಂದು ಆರ್ ನನ್ನು ಕೇಳಿದೆ. ’ಇದು ಬ್ಯುಸಿನೆಸ್, ಆ ಬಸ್ಸಿನವನು ಅವರಿಂದ ಹಣ ತೆಗೆದುಕೊಂಡಿರುವುದಿಲ್ಲವೇ ಅದರಲ್ಲಿ ಕೊಡಲಿ’ ಅಂದ. ಅವನು ಈಗ ಬೇರೆ ಬಸ್ ತಂದು ಅವರನ್ನು ಕಳಿಸಲು ಅಷ್ಟೇ ಖರ್ಚಾಗುತ್ತದೆಂದೂ ಆದರೆ ಅದಕ್ಕಾಗಿ ಅವರ ಬಹಳಷ್ಟು ಸಮಯ ವ್ಯರ್ಥವಾಗುವುದರಿಂದ ನಾನು ಕೇಳಿದ ಹಣಕೊಟ್ಟು ಅವರು ನನ್ನ ಬಸ್ ಹತ್ತಿದ್ದಲ್ಲಿ ಅವರಿಗೇ ಅನುಕೂಲವಾಗುತ್ತಿತ್ತೆನ್ನುವುದು ಅವನ ವಾದವಾಗಿತ್ತು. ಅವನ ವ್ಯವಹಾರಿಕ ಜಾಣ್ಮೆಗೆ ತಲೆದೂಗಿದೆ. 
 
 
ಕೊರಿಯಾದವನೊಂದಿಗೆ ವ್ಯವಹಾರ ಕುದುರದಿದ್ದರಿಂದ ಬೇಸರಗೊಂಡ ನಮ್ಮ ಆರ್ ಮತ್ತೆ ಹೊರಡಲು ರೆಡಿಯಾದ. ಅವನು ಬಸ್ ಚಾಲನೆ ಮಾಡಲು ಆರಂಭಿಸಿದ ಕೂಡಲೇ ಬಸ್ ಒಳಗಿಂದ ಸ್ಟಾಪ್, ಸ್ಟಾಪ್ ಎಂಬ ಕೂಗು ಕೇಳಿಬಂತು. ಹಿಂತಿರುಗಿ ನೋಡಿದರೆ ಅರ್ಧದಷ್ಟು ಜನ ಬಸ್ ನಿಂದ ಕಾಣೆಯಾಗಿದ್ದರು! ಆರ್ ಬಸ್ ನಿಲ್ಲಿಸಿದ್ದ ಕೂಡಲೇ ಅನೇಕರು ನಮಗೆ ಕೆಳಗಿಳಿಯಲೆಂದೇ ಬಸ್ ನಿಲ್ಲಿಸಿರಬಹುದೆಂದು ತಿಳಿದು ಆ ಪ್ರಕೃತಿ ಸೌಂದರ್ಯದಲ್ಲಿ ತಮ್ಮ ಪ್ರಕೃತಿ ಕರೆಯನ್ನು ಫ್ರೀಯಾಗಿ ನೀಗಿಸಿಕೊಳ್ಳಲು ಹೋಗಿದ್ದರು. ಮೊದಲೇ ವ್ಯವಹಾರ ಗಿಟ್ಟದಿದ್ದರಿಂದ ಬೇಸರಗೊಂಡಿದ್ದ ಆರ್ ಯಾರು ಅವರಿಗೆ ಕೆಳಗಿಳಿಯಲು ಹೇಳಿದ್ದು ಎಂದು ಗೊಣಗಾಡತೊಡಗಿದ್ದ. ಅವನ ಗೊಣಗಾಟ ಕೇಳಿದ ಜ್ಯೂಜ಼ರ್ ತಾನೂ ಕೆಳಗಿಳಿದು ಕೆಳಗಿಳಿದಿದ್ದವರನ್ನೆಲ್ಲಾ ಕೂಗಿ ಕರೆಯತೊಡಗಿದ. ಬಸ್ ನಿಲ್ಲಿಸಿದಾಗ ನನಗೂ ಕೆಳಗಿಳಿಯಬೇಕೆಂಬ ಮನಸಾಗಿದ್ದರೂ ಆರ್ ಮತ್ತು ಕೊರಿಯಾದವನ ನಡುವಿನ ವ್ಯವಹಾರದ ಬಗ್ಗೆ ಕುತೂಹಲವಾಗಿದ್ದರಿಂದ ಅದನ್ನೇ ಕೇಳಿಸಿಕೊಂಡು ಕೂತಿದ್ದೆ. ಕೆಲಗಿಳಿದಿದ್ದವರನ್ನು ಕರೆಯುವ ನೆಪದಲ್ಲಿ ಇಳಿದೆ. ದೂರದಲ್ಲಿ ಗುರುಬಸವಯ್ಯನವರು ತಮ್ಮ ಕ್ಯಾಮರಾ ಹಿಡಿದು ಹಸುವೊಂದಕ್ಕೆ ಫ಼ೋಕಸ್ ಮಾಡತೊಡಗಿದ್ದವರು ಜ್ಯೂಜ಼ರ್ ಕೂಗಿನಿಂದ ಹಿಂದಿರುಗಿ ನೋಡಿದವರೇ ಚೇ, ಚೇ ಎಂಥಾ ಚಾನ್ಸ್ ಮಿಸ್ಸಾಯಿತೆಂದು ಗೊಣಗಾಡುತ್ತಾ ಹಿಂದಿರುಗಿದರು. ಅವರ ಗೊಣಗಾಟ ಕೇಳಿ ’ಏನ್ ಸಾರ್ ಸೀನ್ ಅದು’ ಎಂದು ಕೇಳಿದೆ. ’ಒಳ್ಳೇ ಹಸು ಕಣ್ರೀ ಅದಕ್ಕೆ ಫ಼ೋಕಸ್ ಮಾಡಿದ್ದೆ’ ಅಂದ್ರು. ಅವರು ತೋರಿಸಿದ ಹಸು ಅರ್ಧ ಫ಼ರ್ಲಾಂಗ್ ದೂರದಲ್ಲಿ ದನದ ಕೊಠಡಿಯಂತಿದ್ದ ಜಾಗದ ಬಳಿ ಮೇಯುತ್ತಿತ್ತು. ’ಬನ್ನಿ ಅದಕ್ಯಾಕೆ ತಲೆ ಕೆಡಿಸಿಕೊಳ್ತೀರ, ಇವೇ ಜರ್ಸಿ, ಹೋಲಿಸ್ಟೈನ್ ಮುಂತಾದ ತಳಿಗಳು ನಮ್ಮ ಊರುಗಳಲ್ಲಿಯೇ ಬೇಕಾದಷ್ಟಿವೆ. ಈ ಯೂರೋಪಿನಿಂದಲೇ ಅವುಗಳೆಲ್ಲಾ ಬಂದಿರೋದು’ ಅಂದೆ. ಹೌದಲ್ವಾ ಎಂದು ಹಸುವಿನ ಫ಼ೋಟೋ ತೆಗೆಯಲಾಗದೆ ಆಗಿದ್ದ ಬೇಸರವನ್ನು ಮರೆತರು. ಇಳಿದಿದ್ದವರನ್ನೆಲ್ಲಾ ಬಸ್ ಹತ್ತಿಸಲು ಜ್ಯೂಜ಼ರನಿಗೆ ಹತ್ತು ನಿಮಿಷ ಬೇಕಾಗಿತ್ತು.
 
 
ಬಸ್ ನ ವೇಗ ಕಡಿಮೆಯಾಗತೊಡಗಿತ್ತು. ನಾವು ಹೋಗುತ್ತಿದ್ದುದು ಎತ್ತರದ ಪ್ರದೇಶಕ್ಕಾದ್ದರಿಂದ ಸುಮಾರು ದೂರ ಬಸ್ ತೀರ್ವವಾದ ಏರುಮುಖದ ರಸ್ತೆಯಲ್ಲಿ ಹತ್ತಬೇಕಿದ್ದರಿಂದ ವೇಗ ಕಡಿಮೆಯಾಗಿ ನಿಧಾನವಾಗಿ ಸಾಗಿತ್ತು. ಅಲ್ಲೊಂದು ರೈಲು ನಿಲ್ದಾಣ ಕಂಡುಬಂತು. ಅಲ್ಲಿ ಬಸ್ ನಿಲ್ಲಿಸಿದಾಗ ಅದೊಂದು ಪೂರ್ಣವಾಗಿ ಮಂಜಿನಿಂದಾರ್ವತವಾದ ಪ್ರದೇಶವಾಗಿತ್ತು. ಅಲ್ಲಿಂದ ನಮ್ಮನ್ನು ರೈಲಿನಲ್ಲಿ ಯೂರೋ ಟಾಪ್ ಗೆ ಕರೆದುಕೊಂಡು ಹೋಗುವುದಾಗಿ ಜ್ಯೂಜ಼ರ್ ಹೇಳಿದ. ಬಸ್ಸಿಳಿದ ನಂತರ ನಮ್ಮನ್ನೆಲ್ಲಾ ಒಂದೆಡೆ ನಿಲ್ಲಿಸಿದ. ನಿನ್ನೆ ರಾತ್ರಿಯೇ ಜ್ಯೂಜ಼ರ್ ನಮಗೆಲ್ಲಾ ಸ್ವೆಟರ್, ಶೂಗಳು, ಕೈಗೆ ಗ್ಲವ್ಸ್, ತಲೆಗೆ ಉಲ್ಲನ್ ಹ್ಯಾಟು, ಇತ್ಯಾದಿ ಬೆಚ್ಚನೆಯ ಉಡುಪನ್ನೆಲ್ಲಾ ಕಡ್ಡಾಯವಾಗಿ ಧರಿಸಿ ಬರಬೇಕೆಂದೂ, ಇಲ್ಲದಿದ್ದಲ್ಲಿ ನೀವು ಯುರೋ ಟಾಪಿನಲ್ಲಿ ಸುತ್ತಾಡುವುದು ಅಸಾಧ್ಯವೆಂದೂ ಎಚ್ಚರಿಸಿದ್ದರಿಂದ ಎಲ್ಲರೂ ಸಾದ್ಯವಾದಷ್ಟು ಬೆಚ್ಚನೆ ಉಡುಪನ್ನೇ ಧರಿಸಿದ್ದೆವು. ಆ ಎತ್ತರದ ಪ್ರದೇಶದಲ್ಲಿ ಅತ್ಯಂತ ಮಂಜಿನಿಂದಾರ್ವತವಾದ ಪರ್ವತದಲ್ಲಿ ರೈಲು ಸಂಚಾರದ ವ್ಯವಸ್ಥೆಯಿದ್ದುದು ಅಚ್ಚರಿಯುಂಟುಮಾಡಿತ್ತು. ಹತ್ತಿರ ಬಂದು ಕೈ ಹಿಡಿದುಕೊಂಡ ಅರಬಿಂದೋ ರಾಯ್ ’ ವಾಹ್ ಇದು ನಿಜವಾದ ಸ್ವರ್ಗ’ ಎಂದು ಉದ್ಗರಿಸಿದರು. ಆ ಸ್ಥಳವನ್ನು ಕಂಡು ರೋಮಾಂಚನಗೊಂಡಿದ್ದರು ರಾಯ್. ಗುರುಬಸವಯ್ಯನವರು, ರಾಜೇಗೌಡರೂ ಆ ಸ್ಥಳದ ಬಗ್ಗೆ ಮೆಚ್ಚುಗೆಯ ಮಾತಾಡತೊಡಗಿದರು.
 
 
’ಇಲ್ಲಿಂದ ರೈಲಿನಲ್ಲಿ ನಮ್ಮನ್ನು ಇನ್ನೂ ಎತ್ತರಕ್ಕೆ ಕರೆದುಕೊಂಡು ಹೋಯ್ತಾರಂತೆ ಮಾರಾಯ್ರಾ’ ಎನ್ನುತ್ತಾ ಭಟ್ಟರು ಬಂದರು. ಡಿಸ್ನಿಲ್ಯಾಂಡಿನಲ್ಲಿ ಫ಼ಾಸ್ಟ್ ಟ್ರಾಕ್ ಟ್ರೈನ್ ನಲ್ಲಿ ಕೂತು ಥ್ರಿಲ್ ಅನುಭವಿಸಿದ್ದು ನೆನಪಾಗಿ ರಾಜೇಗೌಡರನ್ನು ಕಿಚಾಯಿಸಲು ’ರಾಜೇಗೌಡ್ರೇ, ಇಲ್ಲಿನ ರೈಲು ಡಿಸ್ನಿಲ್ಯಾಂಡಿನಲ್ಲಿ ಕೂತ ಫ಼ಾಸ್ಟ್ ಟ್ರಾಕ್ ರೈಲಿನ ಥರಾ ಸ್ಪೀಡಾಗಿ ಹೋಗದಿಲ್ಲ ಅಲ್ವಾ’ ಅಂದೆ.  ’ಛೆ, ಛೇ ಎಲ್ಲಾದ್ರೂ ಉಂಟಾ, ಹಂಗೇನಾದ್ರೂ ಆದ್ರೆ ಎಲ್ಲರು ಶಿವನ ಪಾದ ಸೇರೋದೇ’ ಎಂದು ಜೋರಾಗಿ ನಕ್ಕರು. ರೈಲಿನ ಟಿಕೆಟ್ ತಂದು ಕೊಟ್ಟ ಜ್ಯೂಜ಼ರ್ ಎಲ್ಲರ ಕೈಗೂ ಒಂದೊಂದು ಟಿಕೆಟ್ ಕೊಟ್ಟು ಇದನ್ನು ಹಿಂದಿರುಗುವವರೆಗೂ ಜೋಪಾನವಾಗಿ ಇಟ್ಟುಕೊಳ್ಳಬೇಕೆಂದೂ ಕಳೆದುಕೊಂಡರೆ ನಿಮ್ಮ ಖೇಲ್ ಖತಂ ಎಂದು ಎಚ್ಚರಿಸಿದ. ಆಲ್ಪ್ಸ್ ಪರ್ವತಗಳ ಮಂಜಿನಿಂದಾವೃತವಾದ ಪ್ರದೇಶದ ಎತ್ತರದ ಪ್ರದೇಶದಲ್ಲಿ ರೈಲು ಸಂಚಾರವನ್ನು ಬಹಳ ಹಿಂದೆಯೇ ಆರಂಭಿಸಿದ್ದ ಯೂರೋಪಿಯನ್ನರು ನಿಜವಾಗಿಯೂ ಸಾಹಸ ಪ್ರಿಯರು. ಆ ಪುಟ್ಟ ರೈಲು ನಿಲ್ದಾಣದಲ್ಲಿ ವಿಶ್ವಾದ್ಯಂತ ಬಂದಿದ್ದ ಪ್ರವಾಸಿಗರು ನೆರೆದಿದ್ದರು. ಪುಟ್ಟದಾದ ಹಳಿಗಳ ಮೇಲೆ ಪುಟ್ಟ ರೈಲುಗಳು ಬಂದು ನಿಲ್ಲುತ್ತಿದ್ದವು. ಒಂದೆರಡು ರೈಲುಗಳು ಹೋದ ನಂತರ ನಾವುಗಳೆಲ್ಲಾ ಬಂದ ರೈಲಿನೊಳಕ್ಕೆ ನುಗ್ಗಿದ್ದೆವು. ಆ ಪುಟ್ಟ ರೈಲಿನಲ್ಲಿ ಯೂರೋಪಿನ ಎತ್ತರದ ಪ್ರದೇಶಕ್ಕೆ ಹೋಗುವುದೊಂದು ವಿಶಿಷ್ಟವಾದ ಅನುಭವ. ದಟ್ಟವಾದ ಮಂಜುಗಡ್ಡೆಯ ಗರ್ಭವನ್ನು ಕೊರೆದು ಮಾಡಲಾಗಿದ್ದ ಸುರಂಗ ಮಾರ್ಗದಲ್ಲಿ ರೈಲು ನುಗ್ಗಿತ್ತು. ೧೮೯೮ ರಲ್ಲಿ ಸುರಂಗ ಮಾರ್ಗವನ್ನು ಆರಂಭಿಸಿ ಅದು ಸಂಚಾರಕ್ಕೆ ೧೯೧೨ ರಲ್ಲಿ ಸಿದ್ದವಾಗಿತ್ತು. ಸುಮಾರು ಹದಿನಾಲ್ಕು ವರ್ಷಗಳ ಕಾಮಗಾರಿಯ ನಂತರ ಯುರೋಪಿನ ಎತ್ತರದ ಸುರಂಗ ಮಾರ್ಗ ಪೂರ್ಣಗೊಂಡಿತ್ತು.
 
 
ರೈಲಿನಲ್ಲಿ ನನ್ನ ಸುತ್ತಮುತ್ತ ಕೂತಿದ್ದವರೆಲ್ಲಾ ಚೈನೀಯರು. ಚೈನೀಯನೊಬ್ಬ ನನ್ನನ್ನು ಕಂಡು ಇಂಡಿಯಾ ಎಂದ. ಹೌದೆಂದು ತಲೆಯಾಡಿಸಿದೆ. ಕೈ ಕುಲುಕಿದವನೇ ಚೈನಾ ಚೈನಾ ಅಂದ. ಅವಷ್ಟೇ ನಮಗರ್ಥವಾದ ಸಂಭಾಷಣೆಯಾಗಿತ್ತು. ಮುಂದಿನ ಪ್ರಯಾಣದುದ್ದಕ್ಕೂ ಅವನು ಚೈನೀ ಭಾಷೆಯಲ್ಲಿಯೇ ನನ್ನೊಟ್ಟಿಗೆ ಮಾತನಾಡತೊಡಗಿದ್ದ. ನಾನೂ ಅವನೊಂದಿಗೆ ಕನ್ನಡದಲ್ಲಿ ಮಾತನಾಡುತ್ತಿದ್ದೆ. ಅವನು ಕಿಟಕಿಯಿಂದಾಚೆ ಕೈ ತೋರಿಸಿ ಮಂಜು ಪರ್ವತಗಳನ್ನು ಕಂಡು ಖುಷಿಯಿಂದ ಏನನ್ನೋ ಹೇಳುತ್ತಿದ್ದರಿಂದ ಅವನು ಆ ಸುಂದರ ಪ್ರಕೃತಿಯ ಬಗ್ಗೆಯೇ ಹೇಳುತ್ತಿರಬಹುದೆಂದು ತಿಳಿದ ನಾನು ಮತ್ತೊಂದು ಗುಡ್ಡವನ್ನು ತೋರಿಸಿ ಎಷ್ಟು ಚೆನ್ನಾಗಿದೆಯಲ್ಲವಾ ಎನ್ನುತ್ತಿದ್ದೆ. ಅವನು ಅತ್ತ ನೋಡಿ ನನ್ನ ಮಾತು ಅರ್ಥವಾದವನಂತೆ ತಲೆಯಲ್ಲಾಡಿಸಿ ನಗತೊಡಗಿದ್ದ. ಆ ಅಧ್ಭುತವಾದ ನಿಸರ್ಗ ಸೌಂದರ್ಯವೇ ಒಂದು ಭಾಷೆಯಾಗಿದ್ದರಿಂದ ನಮ್ಮ ಭಾಷೆಗಳು ಅಲ್ಲಿ ಗೌಣವಾಗಿದ್ದವು. ನನ್ನ ಪಕ್ಕದಲ್ಲಿ ಬಂದು ಕೂತ ಚೈನೀ ಮನುಷ್ಯ ಆತನ ಕ್ಯಾಮರಾವನ್ನು ಬೇರೆಯೊಬ್ಬರ ಕೈಗೆ ಕೊಟ್ಟು ಫೋಟೋ ತೆಗೆಸಿಕೊಂಡ. ನಾನೂ ನನ್ನ ಕ್ಯಾಮರಾದಿಂದಲೂ ತೆಗೆಸಿಕೊಂಡೆ. ಆತ ತನ್ನ ಹೆಂಡತಿಯನ್ನೂ ಕರೆದುಕೊಂಡು ಬಂದಿದ್ದ. ನನ್ನ ಮುಂದಿನ ಸೀಟಿನಲ್ಲಿ ಕೂತಿದ್ದ ಚೈನೀ ಯುವತಿಯರು ತಮ್ಮ ಬ್ಯಾಗಿನಿಂದ ಚಾಕೋಲೇಟ್ ತೆಗೆದವರೇ ಎಲ್ಲರಿಗೂ ಹಂಚಿ ನನಗೂ ಕೊಟ್ಟಿದ್ದರು. ಅವರಿಗೆ ಥ್ಯಾಂಕ್ಯೂ ಅಂದೆ. ಅವರೂ ನನಗೆ ಥ್ಯಾಂಕ್ಯೂ, ಥ್ಯಾಂಕ್ಯೂ ಅಂದರು. ಆ ಪುಟ್ಟ ಪ್ರಯಾಣದ ಅವಧಿಯಲ್ಲಿ ನಾವುಗಳು ಪರಸ್ಪರ ಭಾಷೆಯ ಅರಿವಾಗದಿದ್ದರೂ ಒಡನಾಟ ಬೆಳೆಸಿಕೊಂಡಿದ್ದೆವು. ರೈಲಿನಿಂದ ಇಳಿದ ಕೂಡಲೇ ನನ್ನನ್ನು ಹಗ್ ಮಾಡಿದ ಚೈನೀ ಮಿತ್ರ ಮತ್ತವನ ಹೆಂಡತಿಗೆ ಬಾಯ್ ಹೇಳಿ ನನ್ನ ತಂಡದವರನ್ನು ಸೇರಿಕೊಂಡೆ.
 
 
ನಾವೀಗ ಸಮುದ್ರಮಟ್ಟದಿಂದ ೧೧,೭೮೨೦ ಅಡಿ ಎತ್ತರದಲ್ಲಿದ್ದೆವು. ಅರಬಿಂದೋ ರಾಯ್ ಅವರ ಪತ್ನಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. ಸ್ವಲ್ಪ ಹೊತ್ತು ಕೂರಿಸಿ ದೀರ್ಘವಾಗಿ ಉಸಿರೆಳೆಯುವಂತೆ ಅವರಿಗೆ ಸೂಚಿಸಿದೆವು. ಎತ್ತರದ ಪ್ರದೇಶವಾದ್ದರಿಂದ ಆಮ್ಲಜನಕದ ಕೊರತೆ ನಮ್ಮನ್ನೂ ಕ್ಷಣ ಕಾಲ ಕಾಡಿತ್ತಾದರೂ ನಂತರ ಅದಕ್ಕೆ ಹೊಂದಿಕೊಂಡಿದ್ದೆವು. ಚಳಿಯಂತೂ ವಿಪರೀತವಾಗಿತ್ತು. ಕೈಗೆ ಹಾಕಿದ್ದ ಉಲ್ಲನ್ ಗ್ಲೌಸ್ ಅನ್ನು ಒಂದು ಕ್ಷಣ ತೆಗೆದರೂ ಬೆರಳುಗಳು ಮರಗಟ್ಟಿದಂತಾಗುತ್ತಿತ್ತು. ಎಲ್ಲೆಲ್ಲೂ ಮಂಜಿನಿಂದಾರ್ವತವಾದ ಹಿಮ ಪರ್ವತಗಳೇ. ಅಲ್ಲೊಂದು ಐಸ್ ಪಾಲೇಸ್ ಇತ್ತು. ಮಂಜುಗಡ್ಡೆಯಿಂದಾರ್ವತವಾಗಿದ್ದ ಅದರೊಳಗೆ ಸುತ್ತಾಡಿ ಬರುವುದೇ ಅಧ್ಭುತವಾದ ಅನುಭವ. ಯೂರೋ ಟಾಪ್ ಮೇಲೆ ಸುತ್ತಾಡಿ ಒಂದಷ್ಟು ಹೊತ್ತು ಬಿಸಿಲಿಗೆ ಮೈ ಒಡ್ಡಿ ಹಿಂದಿರುಗಿ ಈ ಐಸ್ ಪಾಲೇಸಿನ ಒಳಗೆ ಪ್ರವೇಶಿಸಿದಾಗಲಂತೂ ಮೈಕೊರಯುವಂತಾ ವಿಪರೀತವಾದ ಚಳಿಯಾಗತೊಡಗಿತ್ತು. ಅಷ್ಟು ಎತ್ತರದಲ್ಲಿ ನಿರ್ಮಿಸಿದ್ದ ಈ ಪ್ಯಾಲೇಸಿನೊಳಗೆ ಎರಡೂ ಕೈಗಳನ್ನು ಬಿಗಿಯಾಗಿ ಕಟ್ಟಿಕೊಂಡು ನಿಂತಿದ್ದ ಭಟ್ಟರು ನನ್ನನ್ನೇ ಕಾಯುತ್ತಿರುವಂತಿತ್ತು. ಆ ಭಯಂಕರ ಚಳಿಯಲ್ಲಿ ಅವರು ’ರೆಡಿಮಿಕ್ಸ್’ ಗಾಗಿ ಕಾಯುತ್ತಿದ್ದರು. ಅದನ್ನು ಕೊಟ್ಟ ಕೂಡಲೇ ಖುಶಿಯಿಂದ ಕುಡಿದು ’ಚಳಿ ಕೊಂಚ ಕಡಿಮೆಯಾಯಿತು ಮಾರಾಯ್ರಾ’ ಎಂದು ಕುಡಿದ ಕೂಡಲೇ ಅದು ಕೆಲಸ ಮಾಡಿತೆಂಬಂತೆ ವರ್ತಿಸಿದ್ದರು.
 
 
ಯೂರೋ ಟಾಪ್ ನಲ್ಲಿ ಸುತ್ತಾಡಿ ಐಸ್ ಪ್ಯಾಲೇಸ್ ನ ಒಳಗಿದ್ದ ಚಳಿಯ ಅನುಭವ ಪಡೆದು ಮತ್ತೆ ಕೆಳಗಿಳಿದೆವು. ಅಲ್ಲೇ ಕೆಳಗೆ ೯೦೦ ಅಡಿ ಎತ್ತರದಲ್ಲಿ ಬಾಲಿವುಡ್ ಹೆಸರಿನ ಇಂಡಿಯನ್ ರೆಸ್ಟೋರೆಂಟ್ ಇತ್ತು. ಬಾಲಿವುಡ್ ಮಂದಿ ಸ್ವಿಟ್ಜ಼ರ್ಲ್ಯಾಂಡಿನಲ್ಲಿ ವಿಪರೀತ ಶೂಟಿಂಗ್ ಮಾಡುತ್ತಿದ್ದರಿಂದ ಈ ಹೋಟೆಲಿಗೆ ಬಾಲಿವುಡ್ ಎಂದೇ ಹೆಸರಿಟ್ಟಿದ್ದರು. ಅಲ್ಲದೆ ಅಲ್ಲಿಯ ಜಾಗವೊಂದಕ್ಕೆ ಹಿಂದಿ ಚಿತ್ರರಂಗದ ಪ್ರಖ್ಯಾತ ನಿರ್ದೇಶಕ, ನಿರ್ಮಾಪಕ ಯಶ್ ಚೋಪ್ರಾ ಹೆಸರನ್ನಿಡಲಾಗಿದೆಯೆಂದು ಜ್ಯೂಜ಼ರ್ ತಿಳಿಸಿದ. ಹಸಿವಾಗಿದ್ದರಿಂದ ಬಾಲಿವುಡ್ ಹೋಟೆಲಿನಲ್ಲಿ ಹೊಟ್ಟೆ ಬಿರಿಯುವಂತೆ ತಿಂದಿದ್ದೆವು. ಊಟ ಮಾಡಿದ ಕೂಡಲೇ ಜ್ಯೂಜ಼ರ್ ನಮ್ಮನ್ನೆಲ್ಲಾ ಹೊರಡಿಸಿಕೊಂಡು ರೈಲು ನಿಲ್ದಾಣಕ್ಕೆ ಕರೆತಂದ. ರೈಲಿನಲ್ಲಿ ಕೂತು ಮತ್ತೆ ಆ ನಯನ ಮನೋಹರವಾದ ಹಿಮಗಡ್ಡೆಯ ಮಡಿಲಿನಿಂದ ಕೆಳಗಿಳಿಯತೊಡಗಿದೆವು. ಟಿಕೆಟ್ ಕಲೆಕ್ಟರ್ ಹೆಂಗಸು ಬಂದು ನಮ್ಮ ಟಿಕೆಟ್ ಪಡೆದು ಪಂಚ್ ಮಾಡಿ ಹಿಂದಿರುಗಿಸಿ ಥಾಂಕ್ಸ್ ಎಂದಳು. ಅವಳು ಪ್ರತಿಯೊಬ್ಬರ ಟಿಕೆಟ್ ಅನ್ನೂ ಪಡೆದು ಪಂಚ್ ಮಾಡಿ ಹಿಂದಿರುಗಿಸಿ ಥಾಂಕ್ಸ್ ಹೇಳುತ್ತಿದ್ದಳು. ರೈಲು ಇಳಿದು ಮತ್ತೆ ಬಸ್ ಹತ್ತಿದೆವು. ಯೂರೋಟಾಪ್ ಹೇಗಿತ್ತೆಂದು ’ಆರ್’ ಕೇಳಿದ. ವಂಡರ್ ಫ಼ುಲ್, ಬ್ಯೂಟಿಫ಼ುಲ್ ಎಂದು ಎಲ್ಲರೂ ಒಟ್ಟಿಗೇ ಹೇಳಿದ್ದೆವು. ಅಲ್ಲಿಂದ ಕೆಳಗಿಳಿದು ಇಂಟರ್ ಲೆಕಾನ್ ಎಂಬ ಪಟ್ಟಣಕ್ಕೆ ಹೋಗಿ ಅಲ್ಲಿ ಸುತ್ತಾಡಲು ಸಮಯವಿದ್ದುದರಿಂದ  ಸುತ್ತಾಡಿದೆವು. ಇಂಟರ್ ಮತ್ತು ಲೆಕಾನ್ ಎಂಬ ಎರಡು ಕೆರೆಗಳ ಮದ್ಯೆ ಈ ಪಟ್ಟಣವಿದ್ದುದರಿಂದ ಅದಕ್ಕೆ ಇಂಟರ್ಲೆಕಾನ್ ಎಂದು ಕರೆಯುತ್ತಾರೆಂದು ಜ್ಯೂಜ಼ರ್ ಹೇಳಿದ.
 
 
ಬಸ್ ಇಳಿಯುವಾಗಲೇ ನನ್ನ ಜತೆಗಿದ್ದವರು ಅಲ್ಲಿದ್ದ ಅಂಗಡಿಯ ಬೋರ್ಡ್ ಓದಿದಿರಾ ಎಂದು ಕೇಳಿದರು. ’ಇಲ್ಲವಲ್ಲಾ ಏನಂತಿತ್ತು’ ಎಂದು ಕೇಳಿದ್ದಕ್ಕೆ ’ಸೆಕ್ಸ್ ಶಾಪ್’ ಅಂತ ಇತ್ತು ಕಣ್ರೀ ಎಂದು ಮೆಲ್ಲನೆ ಕಿವಿಯಲ್ಲಿ ಹೇಳಿದರು. ಅವರು ಹಾಗೆ ಹೇಳಿದ ಎರಡು ನಿಮಿಷವಾಗುವಷ್ಟರಲ್ಲಿ ಮತ್ತೊಬ್ಬರೂ ಬಂದು ಅದನ್ನೇ ಪುನರುಚ್ಚರಿಸಿದ್ದರು. ಇನ್ನೂ ಸಮಯವಿದೆಯಲ್ಲಾ ನೋಡೇ ಬಂದು ಬಿಡೋಣವೆಂದು ಅವರನ್ನು ಕರೆದುಕೊಂಡು ಅದರತ್ತ ಹೊರಟೆ. ಸೆಕ್ಸ್ ಶಾಪಿನ ಬಳಿಗೆ ಬರಲು ಸಿದ್ದರಾಗಿದ್ದ ಮೊದಲು ಹೇಳಿದವರು ನಾನು ಮತ್ತೊಬ್ಬರನ್ನೂ ಜತೆಗೆ ಕರೆದಿದ್ದರಿಂದ ನಮ್ಮ ಜತೆಗೆ ಬಾರದೇ ತಪ್ಪಿಸಿಕೊಂಡರು. ಆದರೆ ನಮ್ಮಂತೆ ಭಾರತದಿಂದ ಪ್ರವಾಸ ಬಂದಿದ್ದ ಹಲವಾರು ಹೆಂಗಸರೂ ಅದರೊಳಗೆ ನುಗ್ಗುತ್ತಿದ್ದರು. ’ಅಲ್ರೀ, ಇಲ್ಲಿಗೆ ಹೆಂಗಸರೇ ನುಗ್ಗುತ್ತಿದ್ದಾರೆ ಅವರ್ಯಾಕೆ ಬರಲು ನಾಚಿಕೊಂಡರೆಂದು ಸ್ನೇಹಿತರು ಅಲ್ಲಿಗೆ ಬರಲು ತಪ್ಪಿಸಿಕೊಂಡವರ ಬಗ್ಗೆ ಕಾಮೆಂಟ್ ಮಾಡಿದಾಗ ’ಮಡಿವಂತಿಕೆ ಪ್ರದರ್ಶನಕ್ಕಾಗಿರಬಹುದು’ ಎಂದೆ. ಅದೊಂದು ಬ್ಲೂ ಫಿಲಂ, ಸಿ ಡಿಗಳನ್ನು, ವಿಧ ವಿಧವಾದ ವಯಸ್ಕ ಆಟಿಕೆಗಳನ್ನು ಮಾರುವ ಅಂಗಡಿಯಾಗಿತ್ತು. ಹೆಸರು ನೋಡಿ ಪಿಸುಗುಟ್ಟಿದ್ದ ಜನ ಮುಕ್ತವಾಗಿ ಅದನ್ನು ಒಮ್ಮೆ ನೋಡಿಬರುವ ಧೈರ್ಯ ಮಾಡಲಿಲ್ಲದ್ದು ಸೂಡೋ ಮಡಿವಂತಿಕೆ ಎನಿಸಿತ್ತು.
 
 
ಅಲ್ಲಿಂದ ಹೊರಬಂದು ಪಾರ್ಕೊಂದರ ಬಳಿ ಬಂದು ಕೂತೆವು. ಸುತ್ತಲೂ ಬೆಟ್ಟ ಗುಡ್ಡಗಳಿಂದಾರ್ವತವಾದ ಪುಟ್ಟ ಪಟ್ಟಣ ಇಂಟರ್ ಲೆಕಾನ್. ಸ್ವಿಟ್ಜ಼ರ್ಲ್ಯಾಂಡಿನ ಬೆಟ್ಟಗಳಲ್ಲಿನ ಮರಗಳೆಲ್ಲಾ ಬಾಬ್ ಕಟ್ ಮಾಡಿಸಿದ ಹುಡುಗಿಯರ ತಲೆಯಂತೆ ಕಾಣುತ್ತಿದ್ದವು. ಬಹುತೇಕ ಕಡೆ ನೈಸರ್ಗಿಕ ಕಾಡಿಗಿಂತ ಹೆಚ್ಚಿಗೆ ಮಾನವ ನಿರ್ಮಿತ ಕಾಡುಗಳಂತೆ ಕಾಣುತ್ತಿದ್ದವು. ಮನೆಗಳೂ ಅಷ್ಟೆ. ಎಲ್ಲವೂ ಕುಕು ಗಡಿಯಾರದ ಆಕಾರದಲ್ಲಿಯೇ ಇದ್ದವು. ನಿನ್ನೆ ನಾವು ಜರ್ಮನಿಯಿಂದ ಬರುವಾಗ ಡ್ರುಬ್ಬಾ ಎಂಬಲ್ಲಿ ಕು ಕೂ ಗಡಿಯಾರವನ್ನು ತಯಾರಿಸುವ ಬಗೆಯನ್ನು ನೋಡಿದ್ದೆವು. ಅಲ್ಲಿ ರಿಯಾಯಿತಿ ದರದಲ್ಲಿ ಗಡಿಯಾರಗಳನ್ನು ಮಾರಾಟ ಮಾಡುತ್ತಿದ್ದರು. ಆ ಗಡಿಯಾರದಲ್ಲಿ ಪುಟ್ಟ ಹಕ್ಕಿಯೊಂದು ಪ್ರತಿ ಅರ್ಧ ಗಂಟೆ, ಒಂದು ಗಂಟೆಗೊಮ್ಮೆ ಹೊರ ಬಂದು ಕುಕೂ ಕುಕೂ ಎಂದು ಕೂಗುತ್ತಿತ್ತು. ಕೀ ಕೊಡುವ ಮೂಲಕ ಅದು ಹೇಗೆ ಕಾರ್ಯ ನಿರ್ವಹಿಸುತ್ತದೆಂದು ಪ್ರಾತ್ಯಕ್ಷಿಕೆ ಮೂಲಕ ನಮಗೆ ತೋರಿಸಿದ್ದರು. ಈ ಕುಕೂ ಗಡಿಯಾರಗಳು ಇಂದಿಗೂ ವಿಶ್ವಾದ್ಯಂತ ಜನಪ್ರಿಯತೆಯನ್ನು ಉಳಿಸಿಕೊಂಡಿವೆಯಂತೆ. ಕಪ್ಪದ್ ಹಾಗು ರಾಯ್ ಒಟ್ಟಿಗೆ ಬಂದವರೇ ನಮ್ಮ ಜತೆ ಕೂತರು. ’ವಾಹ್, ಕ್ಯಾ ಸ್ವಿಟ್ಜ಼ರ್ಲ್ಯಾಂಡ್ ಹೆ ಯಾರ್!! ಹಮಾರ ಪೈಸಾ ವಸೂಲ್ ಹೋಗಯಾ’ ಎಂದರು ರಾಯ್. ಅವರು ಪ್ರವಾಸದುದ್ದಕ್ಕೂ ತಮಗಿಷ್ಟವಾದುದನ್ನು ಕಂಡಾಗಲೆಲ್ಲಾ ಪ್ರತಿಯೊಬ್ಬರ ಬಳಿಗೂ ಹೋಗಿ ಪೈಸಾ ವಸೂಲ್ ಹೋಗಯಾ, ಪೈಸಾ ವಸೂಲ್ ಹೋಗಯಾ ಎನ್ನುತ್ತಿದ್ದರು. ’ಈ ಚಳಿಯಲ್ಲಿ ಎಷ್ಟು ತಗಂಡರೂ ಎನೇನೂ ಕೆಲಸ ಮಾಡಲ್ಲ ಕಣ್ರೀ’, ಎಂದು ಮಾತಿಗಿಳಿದ ಕಪ್ಪದ್ ತಮ್ಮಲ್ಲಿದ್ದ ರೆಡಿಮಿಕ್ಸ್ ಅನ್ನು ಕುಡಿಯತೊಡಗಿ ’ಎಲ್ಲಿ ನಿಮ್ದೂ. ಶುರುಮಾಡಿ ಒಳ್ಳೇ ವಾತಾವರಣವಿದೆ’ ಅಂದರು.   
 
(ಮುಂದುವರೆಯುವುದು)
  
 

 

 
 

ಚಿತ್ರಗಳಲ್ಲಿ...ಮಾರುಕಟ್ಟೆಯ ಯಾವ ಆಮಿಶಕ್ಕೂ ಮಣಿಯದ ಆಮಿಶ್!

 

ಇಂಡಿಯಾನಾ, ಒಹಾಯೋ, ಪೆನ್ಸಿಲ್ವೇನಿಯಾ, ಕೆಂಟಕಿ, ಇಲಿನಾಯ್, ಅಲಬಾಮಾ ರಾಜ್ಯಗಳಲ್ಲಿ ನೆಲೆ ಮಾಡಿಕೊಂಡಿರುವ ಆಮಿಶ್ ಜನಾಂಗ್ ವನ್ನು ಇವತ್ತಿಗೂ ಅಮೆರಿಕನ್ನರು ಕುತೂಹಲದಿಂದ ಗಮನಿಸುತ್ತಾರೆ. ಈ ಜನ ಯೂರೋಪಿನ ಜರ್ಮನಿ, ಸ್ವಿಟ್ಜ಼ರ್ಲ್ಯಾಂಡ್ ದೇಶಗಳಿಂದ ಅಮೆರಿಕಾಕ್ಕೆ ವಲಸೆ ಬಂದವರು. ಇವರು ಪ್ರಾಟೆಸ್ಟೆಂಟ್ ಕ್ರಿಸ್ಚಿಯನ್ನರಾದರೂ ಅವುಗಳ ಆಡಂಬರವನ್ನು ಆಚರಿಸದೇ ತಮ್ಮದೇ ಆಮಿಶ್ ಪಂಥವನ್ನು ಆಚರಿಸುವವರು. ಮನುಷ್ಯ ಹುಟ್ಟಿರುವುದು ನಿಸರ್ಗದ ಮಡಿಲಲ್ಲಿ ತಾನೆಷ್ಟು ತೃಣಮಾತ್ರ ಎಂಬುದನ್ನು ಅರಿತು ನಿಸರ್ಗವನ್ನು, ದೇವರನ್ನು ಆರಾಧಿಸುತ್ತಾ ಬದುಕುವ ಕಾರಣಕ್ಕೆ ಮಾತ್ರ ಎನ್ನುವುದು ಇವರ ಜೀವನ ಸಿದ್ಧಾಂತ. ಅಮೆರಿಕಾದ ಎಲ್ಲ ಆಡಂಬರ, ಅಬ್ಬರಗಳನ್ನೂ ನಿರಾಕರಿಸಿ, ಹೊಲಗದ್ದೆ ಮಾಡಿಕೊಂಡು, ಕುದುರೆ ಗಾಡಿ ಬೈಸಿಕಲ್ಲು ಓಡಿಸಿಕೊಂಡು, ತಮ್ಮ ಆಹಾರವನ್ನು ತಾವೇ ಉತ್ಪಾದಿಸಿಕೊಂಡು ಬದುಕುತ್ತಿರುವ ಸಂಕೋಚದ ಸ್ವಾವಲಂಬಿ ಜನರಿವರು.

 

 
 
 
 
 
 
 
 
 
 
 
 
 
 
 
 
 
 
Copyright © 2011 Neemgrove Media
All Rights Reserved