ಗಡ್ಡದ ರಾಮೇಗೌಡ

(ಸಂಗ್ರಹ)
ಒಂದೂರಿನಲ್ಲಿ ಒಬ್ಬ ರೈತ ಇದ್ದ. ಅವ್ನ್ ಹತ್ರ ಹತ್ತಾರು ಆಡ್ಗಳು ಇದ್ವು. ಅವ್ನು ಆ ಆಡ್ಗಳ್ನ ಮೇಸಕೆ ಅಂತ ದಿನಾ ಕಾಡಿಗೋಗನು. ಹಗಲೆಲ್ಲ ಆಡ್ಗಳ್ನ್ ಮೇಸ್ಗಂಡು ಸಂಜೆ ಹೊತ್ಗೆ ಮನೆಗೆ ಬರನು. ಎಲ್ಲಾ ಸರೀಗೆ ಇತ್ತು. ಹಿಂಗಿರ ಬೇಕಾದ್ರೆ ಒಂದ್ ದಿನ ಒಂದ್ ದೊಡ್ ಹೋತ ಮೇಯ್ಕಂಡ್, ಮೇಯ್ಕಂಡ್ ಕಾಡ್ನಲೆ ಉಳ್ಕಬುಡ್ತು. ಸಂಜೆ ಆಯ್ತು. ಭಾರೀ ಕತ್ಲೆ ಆಯ್ತು. ಹೋತ ಸುತ್ತ ನೋಡುತ್ತೆ...ಅಕ್ಕ ಪಕ್ಕ ಯಾವ ಆಡೂ ಇಲ್ಲ!! ಭಾರೀ ಕತ್ಲು! ಅದ್ಕೆ ಭಯ ಆಗೋಗ್ ಬುಡ್ತು. ಅಯ್ಯೊ ಶಿವ್ನೆ ಇಂಗಾತಲಪ್ಪ...ಜೊತ್ಗೆ ಯಾರೂ ಇಲ್ಲ...ಈ ಪಾಟಿ ಕತ್ಲೆ ಬೇರೆ ಆಯ್ತು.
 
ಹುಲಿ ತೋಳ ಯಾವ್ದಾದ್ರು ಬಂದು ನನ್ನ ತಿಂದ್ಕ್ ಬುಟ್ರೆ ಗತಿಯೇನು ಅಂತ ಹೆದರಿಕ್ಯಂಡ್ ಬುಡ್ತು. ಈಗ ಜೀವ ಉಳುಸ್ಕಳಕೆ ಏನಾದ್ರು ಮಾಡ್ಬೇಕು ಅಂತ ಆಡು ಯೋಚ್ನೆ ಮಾಡ್ತಾ ಇದೆ. ಅಂಗೆ ಕತ್ತೆತ್ತಿ ಸುತ್ತ ನೋಡ್ತು. ದೂರ್ದಲಿ ಒಂದು ಬಲವಂತ್ ಕಾಳಮ್ನ ಗುಡಿ ಕಾಣುಸ್ತು. ದೈರ್ಯ ಬಂದ್ಬುಡ್ತು. ಓಡಿ ಓಡಿ ಹೋಗಿ ಅದ್ರ್ ಒಳಿಕೆ ಸೇರ್ಕಂಡು ಬಾಗ್ಲ ಹಾಂಕಂಬುಡ್ತು. ಆ ಭಾಗ್ಲು ಹಾಕಿದ ಸದ್ದು ಅಲ್ಲೆ ಇದ್ದ ಒಂದು ಗುಳ್ಳೆನರಿಗೆ ಕೇಳಿಸ್ ಬುಡ್ತು. ಅದು ನರಿ ಬಾಳ ಬುದ್ವ್ಂತ. ಮೆಲ್ಕೆ ಗುಡಿ ಹತ್ರ ಬಂತು. ಬಾಗಿಲು ಬಡ್ದು ಯಾರು ಒಳ್ಗೆ ಬಾಗ್ಲಾಕಂಡರು ಅಂತ ಗದ್ಲಮಾಡಿ ಕೇಳ್ತ್ತು. ಹೋತುಂಗೆ ಭಯ ಆಯ್ತು, ಏನಪ್ಪ ಮಾಡದು ಈಗ ಅಂತ. ಸ್ವಲ್ಪ ಹೊತ್ತು ಯೋಚ್ನೆ ಮಾಡ್ತು. ದೈರ್ಯ ಮಾಡ್ತು. "ನಾನೇ!!!!!! ಗಡ್ಡದ ರಾಮೇಗೌಡ!!!! ಅಂತ ದನಿ ಬದಲಾಯ್ಸ್ಕಂಡು ಜಬರ್ದಸ್ತಾಗಿ ಉತ್ತರ ಕೊಡ್ತು. ಇದ್ಯಾವುದಿದು ಗಡ್ಡದ ರಾಮೇಗೌಡ?! ಆಡಿನ ವಾಸ್ನೆ ಬರ್ತಾ ಇದೆ... ಆದ್ರೆ ಈ ಪ್ರಾಣಿ ಗೌಡ ಅಂತ ಹೇಳ್ತಾ ಇದೆ ಅಂತ ನರಿಗೆ ಯಾಕೋ ಅನುಮಾನ ಬಂತು. ತಡಿ ಇನ್ನೊಂದ್ ಸಾರಿ ಕೇಳೇ ಬುಡನ ಅಂತ ಇನ್ನೊಂದು ಸಾರಿ ’ಯಾವನಲೇ ಅದು’ ಅಂತ ಜೋರಾಗಿ ಕೇಳ್ತು. ಆಗ ಹೋತ "ಲೋ ಮುಟ್ಟಾಳ ನಾನೆ ಕಾಣೊ ಗಡ್ಡದ ರಾಮೇಗೌಡ. ಯಾಕೆ ಗಾಂಚಾಲಿ  ಮಾಡ್ತಾ ಇದ್ದಿಯಾ?!! ಬೇಕಾ ಗೂಸು ಬಡ್ಡಿಮಗ್ನೆ" ಅಂತು. ಆಗ ಇದ್ಯಾವ್ದೊ ಗಡದ್ದಾದ ಪ್ರಾಣಿನೆ ಇರ್ಬೇಕು ಅಂತ ನರಿಗೆ ಭಯ ಆಯ್ತು. ಅಂಗಾದ್ರೆ ಕುರುಹು ತೋರ್ಸು ಅಂತು ನರಿ. ಆಗ ಹೋತ ಕದದಲ್ಲಿದ್ದ ತೂತಿನ ಮೂಲಕ ತನ್ನ ಉದ್ದನೆ ಗಡ್ಡ ತೋರುಸ್ತು.
 
ಅರೆ ನಿಜ್ಕೂ ಗಡ್ಡದ ರಾಮೇಗೌಡನೇ ಅಂತ ನರಿ ಹೆದ್ರಿ ಓಡೋಯ್ತು. ಓಡ್ತಾ ಓಡ್ತಾ ಕಾಡಲ್ಲಿ ಸಿಕ್ಕ ಹುಲಿ ಮತ್ತು ತೋಳುನ್ನ ಬರ್ರಪ್ಪಾ ಇಲ್ಲೊಂದು ಹೊಸ ಪ್ರಾಣಿ ಸೇರ್ಕಂಡು ಬುಟ್ಟಿದೆ ಅಂತ ಕರ್ಂಡು ಬಂತು. ಹುಲಿ ತೋಳ ಎರಡೂ ಬಂದು "ಲೇ...ನಿನ್ನ ಕುರುಹು ತೋರ್ಸ್ಲಾ’ ಅಂದೊ. ಹೋತ ಮತ್ತೆ ಕದಿನ ತೂತಿನಿಂದ ಗಡ್ಡ ತೋರುಸ್ತು. ಅಂಗಾದ್ರೆ ಈಗ ನಿನ್ನ ಹಲ್ ತೋರ್ಸು ಅಂದೋ. ಹೋತಕ್ಕೆ ಭಯ ಆಯ್ತು. ಆದ್ರು ಬುದ್ಧಿವಂತ್ಕೆ ಮಾಡಿ ತನ್ನ ಹಲ್ಲು ಅಂತ ತನ್ನ ಎರಡೂ ಕೋಡುಗಳ್ನ ಬಾಗ್ಲ ಮೂಲಕ ತೋರುಸ್ತು. ಅಷ್ಟು ದೊಡ್ಡ ಹಲ್ಲಾ!!! ಅದನ್ ನೋಡಿ ಹುಲಿ ತೋಳಗಳಿಗೂ ಭಯ ಆಯ್ತು. ಯಾವ್ದೋ ಭಯಂಕರ ಪ್ರಾಣೀನೇ ಇರ್ಬೇಕು ಕಣಿರ್ಲಾ ಅಂತ ಎಲ್ಲ ಒಂದೆ ಸರಿಕೆ ಓಡಿ ಕಾಡ್ಗೆ  ಸೇರ್ಕೊಂಡೊ. ಹೋತ ಸದ್ಯ ಬದಿಕಂಡೆ ಅಂತ ಬಲವಂತ್ ಕಾಳಮ್ಮಂಗೆ ಕಾಪಾಡ್ದೆ ಕಣವ್ವಾ ಅಂತ ಕೈಮುಗ್ದು, ಬೆಳಕುಹರಿಯೋವರೆಗೆ ಅಲ್ಲೇ ಇದ್ದು ಸೂರ್ಯ ಮೂಡಿದ ಮೇಲೆ ಊರಿಂದ ಬಂದ ಆಡ್ಗಳ ಜೊತ್ಗೆ ಸೇರ್ಕಂಡು ಸುಖವಾಗಿ ಮನೆ ಸೇರ್ಕತ್ತು.
 
 
 

 

 
 
 
  
 
 
 
 
 
 
Copyright © 2011 Neemgrove Media
All Rights Reserved